Advertisement

ಗೆಳತಿ ಜತೆ ಜಾಲಿರೈಡ್‌ಗೆ ಬೈಕ್‌ ಕದ್ದವ ಸೆರೆ

12:49 AM Sep 17, 2019 | Lakshmi GovindaRaju |

ಬೆಂಗಳೂರು: ಪ್ರೇಯಸಿ ಜತೆ ಜಾಲಿ ರೈಡ್‌ ಹೋಗಲು ಹಾಗೂ ಆಕೆ ಜತೆ ಐಷಾರಾಮಿ ಜೀವನ ನಡೆಸಲು ಬುಲೆಟ್‌, ಕೆಟಿಎಂ ರೀತಿಯ ದುಬಾರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡತ್ತಿದ್ದ ದೇಹದಾರ್ಢ್ಯ ಸಂಸ್ಥೆಯೊಂದರ ಸದಸ್ಯ, ತನ್ನ ನಾಲ್ವರು ಸಹಚರರೊಂದಿಗೆ ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ವಿವೇಕನಗರದ ಗುಣಶೇಖರ್‌ ಅಲಿಯಾಸ್‌ ಕುಟ್ಟಿ (21), ಆತನ ಸಹಚರರಾದ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಹೆನ್ರಿ ಮೈಕಲ್‌ (25), ದಂಡು ಅಜಿಕ್‌ ಕುಮಾರ್‌ (20), ಗಾಯಮ್‌ ಪಂಚಾಲಯ್ಯ (20) ಮತ್ತು ಪೊಲುಕುಂಟ ಮಹೇಶ್ವರ ರೆಡ್ಡಿ (25) ಬಂಧಿತರು. ಅವರಿಂದ 45,200 ರೂ. ಮೌಲ್ಯದ 16 ಬುಲೆಟ್‌, ಆರು ಡಿಯೋ, 2 ಕೆಟಿಎಂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ರಾತ್ರಿ ವೇಳೆ ಮನೆಗಳ ಮಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು, ಡೈರೆಕ್ಟ್ ಮಾಡಿಕೊಂಡು ಕದ್ದೊಯ್ಯುತ್ತಿದ್ದ ತ್ತಿದ್ದ ಆರೋಪಿಗಳು, ಅವುಗಳನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಕೋರ್ಟ್‌ನಲ್ಲಿ ತಮ್ಮ ಪರ ವಾದ ಮಂಡಿಸುವ ವಕೀಲರ ಫೀಸ್‌, ಐಷಾರಾಮಿ ಜೀವನಕ್ಕಾಗಿ ಬಳಸುತ್ತಿದ್ದರು.

ಆರೋಪಿಗಳ ಬಂಧನದಿಂದ ನಗರದ ಹತ್ತು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಗುಣಶೇಖರ್‌ ನಗರದಲ್ಲೇ ವಾಸವಾಗಿದ್ದು, ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಆಂಧ್ರಪ್ರದೇಶದ ಸಹಚರರ ಜತೆ ಕಳವು ಮಾಡುತ್ತಿದ್ದ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಜಕ್ಕಸಂದ್ರದಲ್ಲಿರುವ ಪ್ರತಿಷ್ಠಿತ ಜಿಮ್‌ ಒಂದರ ಸದಸ್ಯತ್ವ ಪಡೆದಿದ್ದಾನೆ. ಅಲ್ಲದೆ, ಕಳವು ಮಾಡಿದ ಬುಲೆಟ್‌ನಲ್ಲಿಯೇ ತನ್ನ ಪ್ರೇಯಸಿ ಜತೆ ಜಾಲಿ ರೈಡ್‌ ಹೋಗುವುದು, ಶಾಪಿಂಗ್‌ ಮಾಡುವುದು, ಪ್ರವಾಸಿ ತಾಣಗಳಿಗೆ ಹೋಗಿ ಐಷಾರಾಮಿ ಜೀವನ ನಡೆಸುತ್ತಿದ್ದ.

ಇನ್ನು ಗುಣಶೇಖರನ ಆಂಧ್ರಪ್ರದೇಶದ ಸ್ನೇಹಿತನಾಗಿರುವ ಅಜಿತ್‌ಕುಮಾರ್‌ ಈ ಮೊದಲು ವಿವೇಕನಗರದಲ್ಲಿಯೇ ವಾಸವಾಗಿದ್ದು, ಮೈಕೋ ಲೇಔಟ್‌, ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೆಲ ವರ್ಷಗಳ ಹಿಂದೆ ತನ್ನ ಸ್ವಂತ ಊರು ಕಡಪಗೆ ತೆರಳಿದ್ದ ಆರೋಪಿ, ಸ್ಥಳೀಯ ರಾಜಕೀಯ ಮುಖಂಡರ ಜತೆ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

Advertisement

ಇಬ್ಬರು ವಾಹನ ಕಳ್ಳರ ಬಂಧನ: ಆಡುಗೋಡಿ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಹಾಗೂ ಸರಕು ಸಾಗಣೆ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಅರುಣ್‌ ಕುಮಾರ್‌ (21) ಮತ್ತು ವಸೀಂ ಪಾಷ (22) ಬಂಧಿತರು. ಆರೋಪಿಗಳಿಂದ ಎರಡು ಟಾಟಾ ಏಸ್‌, 10 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಈ ಪೈಕಿ ಅರುಣ್‌, ಆಂಧ್ರಪ್ರದೇಶದಲ್ಲಿ ಫೋಟೋ ಸ್ಟುಡಿಯೋ ನಡೆಸುತ್ತಿದ್ದು, ಲಕ್ಷಾಂತರ ರೂ. ನಷ್ಟ ಹೊಂದಿದ್ದ.

ಈ ಸಾಲದ ಹಣ ತೀರಿಸಲು ಮತ್ತು ಮೋಜಿನ ಜೀವನಕ್ಕಾಗಿ ನಗರಕ್ಕೆ ಬಂದು ಬೈಕ್‌ ಕಳವು ಮಾಡಿ ತೆಗೆದುಕೊಂಡು ಹೋಗುತ್ತಿದ್ದ. ಇನ್ನು ಮನೆ ಮುಂದೆ ನಿಂತಿದ್ದ ಎರಡು ಟಾಟಾ ಏಸ್‌ ವಾಹನ ಕಳವು ಮಾಡಿದ್ದ ವಸೀಂ ಪಾಷ ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಆರು ಲಕ್ಷ ರೂ. ಮೌಲ್ಯದ ಎರಡು ಟಾಟಾ ಏಸ್‌ ವಾಹನ ಜಪ್ತಿ ಮಾಡಲಾಗಿದೆ.

ಗಾಂಜಾ ಮಾರಾಟಗಾರರ ಸೆರೆ: ಗಾಂಜಾ ಮತ್ತು ಎಂಡಿಎಂಎ ಪುಡಿ ತಂದು ನಗರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಏಳು ಮಂದಿ ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರನ್ನು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಲಕ್ಷ್ಮಣ್‌ ಚೇರುಡು (22), ಸಾಯಿ ಚರಣ್‌ (24), ಸುಜೀತ್‌ (26), ಡಾಮ್‌ನಿಕ್‌ (22), ಸುದೀಶ್‌ (26), ಸಾಹಿಲ್‌ (21), ಸಜನ್‌ದಾಸ್‌ (24) ಬಂಧಿತರು. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 22.5 ಕೆ.ಜಿ. ಗಾಂಜಾ, 50 ಗ್ರಾಂ. ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಒಡಿಶಾ ಮತ್ತು ಆಂಧ್ರಪ್ರದೇಶ ಗಡಿಭಾಗದಿಂದ ಗಾಂಜಾ ಮತ್ತು ಎಂಡಿಎಂಎಯನ್ನು ಬಸ್‌, ರೈಲುಗಳ ಮೂಲಕ ನಗರಕ್ಕೆ ತಂದು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮನೆಗಳವು ಮಾಡುತ್ತಿದ್ದ ಐವರ ಬಂಧನ: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಮನೆ ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಎಚ್‌ಎಸ್‌ಆರ್‌ ಲೇಔಟ್‌ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿಯ ಸತೀಶ್‌(27), ಮಂಜುನಾಥ್‌(32), ತಿಮ್ಮಣ್ಣ (28), ರಾಘವೇಂದ್ರ (25) ಮತ್ತು ರಾಮ್‌(57) ಬಂಧಿತರು.

ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 440 ಗ್ರಾಂ ತೂಕದ ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ವಿವಿಧೆಡೆ ತಂಡ ಕಟ್ಟಿಕೊಂಡು ಬೀಗ ಹಾಕಿದ ಮನೆಗಳನ್ನು ಬೆಳಗ್ಗೆ ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದರು. ಇದೇ ವೇಳೆ ಬೈಕ್‌ ಕಳವು ಮಾಡುತ್ತಿದ್ದ ಬಾಣಸವಾಡಿಯ ತಂಗರಾಜ್‌(25), ಮೋಹನ್‌ ದಾಸ್‌ (25) ಮತ್ತು ನರೇಶ್‌ ಎಂಬವರನ್ನು ಬಂಧಿಸಿ, 13 ಲಕ್ಷದ 16 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಹೇಳಿದರು.

ಮಾದಕ ವಸ್ತು ಮಾರಾಟಗಾರರು ಹಾಗೂ ದ್ವಿಚಕ್ರ ವಾಹನ ಕಳ್ಳತನ ಸೇರಿ 51 ಅಪರಾಧ ಪ್ರಕರಣಗಳನ್ನು ಭೇದಿಸಿರುವ ಆಗ್ನೇಯ ವಿಭಾಗ ಪೊಲೀಸರು ರಾಜ್ಯ ಮತ್ತು ಅಂತಾರಾಜ್ಯದ 21 ಮಂದಿಯನ್ನು ಬಂಧಿಸಿ, 90.20 ಲಕ್ಷ ರೂ. ಮೌಲ್ಯದ 22 ಕೆ.ಜಿ. 550 ಗ್ರಾಂ. ಮಾದಕ ವಸ್ತು, 47 ದ್ವಿಚಕ್ರ ಮತ್ತು 2 ಟಾಟಾ ಏಸ್‌ ಜಪ್ತಿ ಮಾಡಿದ್ದಾರೆ.
-ಇಶಾ ಪಂತ್‌, ಆಗ್ನೇಯ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next