ಬೆಳ್ತಂಗಡಿ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಸರಕಾರಿ ಇಲಾಖೆಯೊಂದರ ಕಾರನ್ನು ಚಾಲಕ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಒಟ್ಟು ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದಿರುವುದಲ್ಲದೆ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಸೆ. 5ರಂದು ರಾತ್ರಿ ಸಂಭವಿಸಿದೆ.
ಲೋಕೋಪಯೋಗಿ ಇಲಾಖೆಯ ವಾಹನವನ್ನು ಚಾಲಕ ಉಮೇಶ್ ನಿರ್ಲಕ್ಷ್ಯತನದ ಚಾಲನೆ ಮಾಡಿರುವ ಪರಿಣಾಮ ಕಾರು, ಒಂದು ಆಟೋ ಹಾಗೂ ಬೈಕ್‌ಗೆ ಢಿಕ್ಕಿಯಾಗಿದೆ. ಬೈಕ್ ಸವಾರ ಖಾಸಗಿ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್ ಜೇಮ್ಸ… (50) ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಾರು ಚಾಲಕ ಮಂಗಳೂರು ಎಸ್‌ಡಿಎಂ ಸಂಸ್ಥೆಯ ಉದ್ಯೋಗಿ ಶಿವಾನಂದ ಅವರ ಕಾರಿನ ಮುಂಭಾಗಕ್ಕೆ, ಆಟೋ ರಿಕ್ಷಾಕ್ಕೂ ಹಾನಿಯಾಗಿದೆ. ಸರಕಾರಿ ಇಲಾಖೆಯ ಕಾರಿನ ಎದುರು ಭಾಗ ಜಖಂಗೊಂಡಿದೆ. ಢಿಕ್ಕಿ ಹೊಡೆದ ಬಳಿಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ತತ್‌ಕ್ಷಣ ಆಟೋ ಚಾಲಕರು ಬೆನ್ನತ್ತಿ ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದರು. ಬಳಿಕ ಸಂಚಾರ ಠಾಣೆಗೆ ಹಸ್ತಾಂತರಿಸಲಾಗಿದೆ.
ಮೇಲ್ನೋಟಕ್ಕೆ ಚಾಲಕ ಮದ್ಯದ ಅಮಲಿನಲ್ಲಿ ಅಪಘಾತ ಎಸಗಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಕಾರು ಚಾಲಕ ಶಿವಾನಂದ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಚಾಲಕನ ವೈದ್ಯಕೀಯ ವರದಿ ಬಳಿಕ ದೂರು ದಾಖಲಾಗಲಿದೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.