ಹೊಸನಗರ: ಇತ್ತೀಚಿನ ದಿನಗಳಲ್ಲಿ ವಾತಾವರಣ ವಿಚಿತ್ರವಾಗಿ ಬದಲಾಗುತ್ತಿದೆ. ಒಮ್ಮೆ ಬರ.. ಮತ್ತೂಮ್ಮೆ ಅತೀವೃಷ್ಟಿ. ಹೀಗಾದರೆ ಮುಂದಿನ ಕತೆ ಹೇಗೆ ಎಂಬ ಆತಂಕ ಬಹುತೇಕರಲ್ಲಿ ಕಾಡುತ್ತಿರುವುದು ಸತ್ಯ. ಇದಕ್ಕೆ ಪ್ರಮುಖ ಕಾರಣ ಪರಿಸರದ ಅಸಮತೋಲನ. ಈ ಬಗ್ಗೆ ಪರಿಸರ ಕಾಳಜಿಯುಳ್ಳ ಜಲತಜ್ಞರೋರ್ವರು ಸದ್ದಿಲ್ಲದೆ ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಹೌದು. ಆಕಾಶ ನೀಲಿಯ ಅಂಗಿ.. ಅದರ ಮೇಲೆ ಪರಿಸರ ಕಾಳಜಿಯುಳ್ಳ ಬರಹ.. ಅದನ್ನು ಧರಿಸಿದ ವ್ಯಕ್ತಿಯೋರ್ವ ಬೈಕ್ ಏರಿ ಊರೂರು ತಿರುಗುತ್ತ ಜನಜಾಗೃತಿ ಮೂಡಿಸುತ್ತಿದ್ದಾರೆ. ಅವರೇ ಹೊಸನಗರ ತಾಲೂಕಿನ ನಗರದ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ.
ನೆರೆ ನೀಗಿಸಲು ಕೂಡ ಗಿಡಮರ ಬೇಕು! ನೆರೆ-ಬರ ನೀಗಿಸಲು ಬೇಕು ಗಿಡ-ಮರ.. ಅವರ ಬೈಕ್ ಯಾತ್ರೆಯ ಪ್ರಮುಖ ಸ್ಲೋಗನ್. ಬರ ನೀಗಿಸಲು ಗಿಡ- ಮರ ಬೇಕು. ಆದರೆ ಗಿಡಮರದಿಂದ ನೆರೆ ಬರದಂತೆ ತಡೆಯಲು ಸಾಧ್ಯವೇ ಎಂಬುದು ಸಹಜ ಪ್ರಶ್ನೆ. ಆದರೆ ಸುಬ್ರಹ್ಮಣ್ಯರ ಪ್ರಕಾರ ಇದು ಬೇಕು. ಪರಿಸರ ಸಮತೋಲನವಿದ್ದಾಗ ಮಾತ್ರ ಎಲ್ಲವೂ ಸಹಜವಾಗಿರುತ್ತದೆ. ಭೂಮಿಯ ಮೇಲಿನ ಹಸಿರು ಕಡಿಮೆಯಾಗುತ್ತಿದೆ. ಬದಲಿಗೆ ಜನಸಂಖ್ಯೆ ಸ್ಫೋಟ. ಭೂ, ಜಲ, ವಾಯು ಮಾಲಿನ್ಯದಿಂದಾಗಿ ಉಷ್ಣಾಂಶ ಹೆಚ್ಚುತ್ತಿದೆ.
ಜನಸಂಖ್ಯೆಗೆ ಅನುಗುಣವಾಗಿ ಕಾಡು ಇಲ್ಲದ ಕಾರಣ ಓಝೋನ್ ಪದರ ತೆಳುವಾಗಿ ಅಲ್ಟ್ರಾ ವಾಯ್ಲೆಟ್ ರೇಸ್ ಭೂಮಿಗೆ ಅಪ್ಪಳಿಸುತ್ತಿದೆ. ಇದರಿಂದಾಗಿ ಮೇಘಸ್ಫೋಟಕ್ಕೆ ಕಾರಣವಾಗಿ ನೆರೆಹಾವಳಿಗೆ ದಾರಿ ಮಾಡಿಕೊಡುತ್ತದೆ ಎಂದು ಸುಬ್ರಹ್ಮಣ್ಯರ ಅಭಿಮತ.
ಜಾಗೃತಿ ಅಗತ್ಯ: ಬೈಕ್ ಏರಿ ಊರೂರು ತಿರುಗಿ, ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಚಕ್ರವಾಕ ಸುಬ್ರಹ್ಮಣ್ಯ, ಈಗಾಗಲೇ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗೆ ತೆರಳಿ ಗಿಡಮರದ ಅಗತ್ಯತೆ ಬಗ್ಗೆ ಅರಿವು ಮೂಡಿಸುತ್ತ ಗಮನ ಸೆಳೆದಿದ್ದಾರೆ. 70 ವರ್ಷ ಪ್ರಾಯದ ಸುಬ್ರಹ್ಮಣ್ಯ ಈಗಾಗಲೇ 650ಕ್ಕೂ ಹೆಚ್ಚು ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಒಟ್ಟಾರೆ ದೂರದೃಷ್ಟಿ ಇಲ್ಲದ.. ಎಲ್ಲಕ್ಕೂ ಮಿಗಿಲಾಗಿ ವೈಯಕ್ತಿಕ ಬದುಕೇ ಮುಖ್ಯ ಎಂಬ ವಾತಾವರಣ ಇರುವ ಸನ್ನಿವೇಶದಲ್ಲಿ ಪರಿಸರ ಕಾಳಜಿ ಹೊತ್ತ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ತಮ್ಮ ನಿವೃತ್ತಿ ಜೀವನದಲ್ಲಿ ಪರಿಸರ ಉಳಿವಿಗಾಗಿ ಬೈಕ್ ಮೂಲಕ ಜಾಗೃತಿ ಯಾತ್ರೆ ಹಮ್ಮಿಕೊಂಡಿರುವುದು ಗಮನಾರ್ಹ.
-ಕುಮುದಾ ನಗರ