ದಾವಣಗೆರೆ: ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಲು ಸರೋಜಿನಿ ಮಹಿಷಿ ಅನುಷ್ಠಾನಕ್ಕೆ ಒತ್ತಾಯಿಸಿ ಸೋಮವಾರ ಕರುನಾಡ ಕನ್ನಡ ಸೇನೆ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದ್ದಾರೆ. ಜಯದೇವ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗದ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಚನೆಗೊಂಡಿದ್ದ ಸರೋಜಿನಿ ಮಹಿಷಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ, ಮೂರ್‍ನಾಲ್ಕು ದಶಕಗಳೇ ಕಳೆದು ಹೋಗಿವೆ. ಯಾವುದೇ ಸರ್ಕಾರ ಸಹ ಈವರೆಗೂ ವರದಿ ಅನುಷ್ಠಾನಕ್ಕೆ ಮುಂದಾಗಲೇ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡನಾಡಿನ ನೆಲ, ಜಲ, ವಿದ್ಯುತ್ ಬಳಸಿಕೊಂಡು ಕೋಟ್ಯಂತರ ಮೊತ್ತದ ವಹಿವಾಟು ನಡೆಸುವ ಬೃಹತ್ ಕಂಪನಿ, ಕಾರ್ಖಾನೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ ಇಲ್ಲ. ಒಂದೊಮ್ಮೆ ಇದ್ದರೂ ಕೆಳ ಹಂತಕ್ಕೆ ಮಾತ್ರ ಸೀಮಿತ. ಕನ್ನಡನಾಡಿನಲ್ಲೇ ಕನ್ನಡಿಗರು ಅನಾಥರಂತಾಗುತ್ತಿದ್ದಾರೆ.
ಕನ್ನಡನಾಡಿನಲ್ಲಿ ಕನ್ನಡಿಗರು ಸಾರ್ವಭೌಮರಾಗಬೇಕು ಎಂಬ ಮಹಾದಾಸೆಯಿಂದ ಸರ್ಕಾರಕ್ಕೆಸಲ್ಲಿಕೆಯಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಈ ಸರ್ಕಾರವಾದರೂ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಸಂಘಟನೆ ರಾಜ್ಯ ಅಧ್ಯಕ್ಷ ಕೆ.ಟಿ. ಗೋಪಾಲಗೌಡ, ಜಿಲ್ಲಾ ಅಧ್ಯಕ್ಷ ಬಿ. ತಿರುಕಪ್ಪ, ಎನ್. ರಾಜೇಂದ್ರ ಬಂಗೇರಾ, ಹರೀಶ್, ಅಣ್ಣಪ್ಪ, ಮಂಜುನಾಥ್, ನಟರಾಜ್ ಆಚಾರ್ಯ, ಶಿವರುದ್ರಪ್ಪ, ಲಕ್ಷ್ಮಿ ಹಿರೇಮಠ, ಸುಜಾತ, ಚಂದ್ರು, ರಮೇಶ್, ಸೋಮಶೇಖರ್, ಆನಂದ್, ವೃಷಭೇಂದ್ರಪ್ಪ, ಶಿವಮೂರ್ತಿ ಇತರರು ಇದ್ದರು.