ಬಾದಾಮಿ: ಡಿ.19ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಜನಸಂಖ್ಯಾವಾರು ಒಳಮೀಸಲು ಜಾರಿಗೆ ವಿಧೇಯಕ ಮಂಡಿಸಬೇಕು. ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಮಾಡದಿದ್ದರೆ ಕಳೆದ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಗತಿ ಈ ಬಾರಿಗೂ ಬಿಜೆಪಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟ ಬೈಕ್ ರ್ಯಾಲಿ ಬಾದಾಮಿಗೆ ಆಗಮಿಸಿದ ಸಂದರ್ಭದಲ್ಲಿ ಸೋಮವಾರ ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ನಾಗಮೋಹನದಾಸ ಆಯೋಗದ ವರದಿ ಶಿಫಾರಸಿನಂತೆ ಪರಿಶಿಷ್ಟರಿಗೆ ಶೇ. 2ರಷ್ಟು ಹೆಚ್ಚಳ ಮಾಡಿ ರಾಜ್ಯ ಸರಕಾರದ ಸುಗ್ರಿವಾಜ್ಞೆ ಹೊರಡಿಸಿದಂತೆ ಸದಾಶಿವ ಆಯೋಗದ ವರದಿ ಶೇ15 ರ ಮೀಸಲಾತಿಯಲ್ಲಿ ಒಳಮೀಸಲಾತಿ ಮಾಡಿರುವುದನ್ನು ಸಂಪುಟದಲ್ಲಿ ಅಂಗೀಕರಿಸಿ ಏರಿಕೆಯ ಶೇ. 2 ರಷ್ಟು ಮೀಸಲು ಸೇರಿಸಿಕೊಂಡು ಶೇ. 17 ರ ಮೀಸಲಾತಿಯಲ್ಲಿ ಪರಿಶಿಷ್ಟರ 101 ಆಯಾ ಜಾತಿ ಗುಂಪುಗಳಿಗೆ ಜನಸಂಖ್ಯಾವಾರು ಒಳಮೀಸಲಾತಿ ಜಾರಿಗಾಗಿ ಪ್ರಸ್ತುತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿ ವಿಧೇಯಕ ಮಸೂದೆ ಮಂಡಿಸಬೇಕು. ಯಾವ ಪಕ್ಷದ ಶಾಸಕರು ಒಳಮೀಸಲು ವಿಧೇಯಕಕ್ಕೆ ಅಡ್ಡಿಪಡಿಸುತ್ತಾರೋ ಅಂತಹ ಒಳಮೀಸಲಾತಿ ವಿರೋಧಿ ಶಾಸಕರಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾದಿಗ ಸಂಘಟನೆಗಳ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಮಾತನಾಡಿ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸಬೇಕು. ಜಾರಿಗೆ ಮೀನಮೇಷ ಎಣಿ ಹಿಂದೇಟು ಹಾಕಿದರೆ ಮುಂದಿನ ಚುನಾವಣೆಯಲ್ಲಿ ಅಸ್ಪ್ರಶ್ಯರ ಬೆಂಬಲವಿಲ್ಲದೇ ಯಾವ ಪಕ್ಷವು ಅಧಿಕಾರಕ್ಕೆ ಬರಲಾರದು. ಅತಂತ್ರ ಸರಕಾರಕ್ಕೆ ರಾಜ್ಯದ ಅಸ್ಪ್ರಶ್ಯರು ಮುನ್ನುಡಿ ಬರೆಯಲಿದ್ದೇವೆ ಎಂದು ಭವಿಷ್ಯ ನುಡಿದರು.
ಸಭೆಯನ್ನು ಉದ್ದೇಶಿಸಿ ಪ್ರಧಾನ ಸಂಚಾಲಕ ಎಸ್.ಆರ್.ರಂಗನಾಥ ಶಿರಾ, ಅಜಿತ ಮಾದರ, ಕೆ.ಡಿ.ಜ್ಯೋತಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಸದಸ್ಯೆ ರಾಮವ್ವ ಮಾದರ, ಮಾದಿಗ ಸಮಾಜದ ಮುಖಂಡರಾದ ಪುಂಡಲೀಕ ಕವಡಿಮಟ್ಟಿ, ನಾಗಪ್ಪ ದೊಡಮನಿ, ಕಾಂತಿಚಂದ್ರ ಜ್ಯೋತಿ, ಸುಭಾಸ ಹೊಸಮನಿ, ಪ್ರವೀಣಕುಮಾರ ಜ್ಯೋತಿ, ಸಾಬಣ್ಣ ದೊಡಮನಿ, ಮುತ್ತು ಗಾಜಿ, ಪ್ರಕಾಶ ಸರನಾಯ್ಕರ ಹಾಜರಿದ್ದರು.
ವರದಿ ಜಾರಿಗೆ ಆಗ್ರಹ
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿ ರುವ ಅಧಿವೇಶನದಲ್ಲಿ ಜನಸಂಖ್ಯಾವಾರು ಒಳಮೀಸಲಾತಿ ಜಾರಿಗೆ ವಿಧೇಯಕ ಮಂಡನೆಗೆ ಆಗ್ರಹಿಸಿ ಹುಬ್ಬಳ್ಳಿಯಿಂದ ಬೆಳಗಾವಿಗೆ ನಡೆಯುತ್ತಿರುವ 100 ಬೈಕ್ ರ್ಯಾಲಿ ಪಟ್ಟಣಕ್ಕೆ ಆಗಮಿಸಿ ಕೆಇಬಿ ಹತ್ತಿರದ ಡಾ| ಅಂಬೇಡ್ಕರ್ ಭವನದಿಂದ ಬೈಕ್ ರ್ಯಾಲಿ ಆರಂಭಗೊಂಡು ಪ್ರಮುಖ ರಸ್ತೆಯ ಮೂಲಕ ಬಸ್ ನಿಲ್ದಾಣ, ತಾಪಂ ಎದುರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ವರದಿ ಜಾರಿಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ಸಂಚರಿಸಿ ಡಿ. 21ರಂದು ಒಳಮೀಸಲಾತಿ ವಿಧೇಯಕ ಮಂಡನೆಯಾಗುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಮುಖಂಡರು ತಿಳಿಸಿದರು.