ಚಿಕ್ಕಮಗಳೂರು: ಅಂಕುಡೊಂಕಿನ ಟ್ಯಾಕ್‌ನಲ್ಲಿ ದೂಳೆಬ್ಬಿಸುತ್ತಾ ಸಾಗುತ್ತಿದ್ದ ರೈಡರ್, ಸುತ್ತಲೂ ನಿಂತು ಶಿಳ್ಳೆ, ಕೇಕೆ ಹೊಡೆಯುತ್ತಾ ಹುರಿದುಂಬಿಸಿದ ಪ್ರೇಕ್ಷಕರು. ಮೈ ಜುಮ್ಮೆನಿಸುವ ಸಾಹಸವನ್ನು ನಗರದ ಜನತೆ ಕಣ್ತುಂಬಿಕೊಂಡರು.
ಭಾನುವಾರ ನಗರದ ಪಟಾಕಿ ಮೈದಾನದ ಮಾರ್ಕೆಟ್ ರಸ್ತೆಯ ಯುವಕರು ಹಾಗೂ ಕಾಫಿ ಲ್ಯಾಂಡ್ ಟೀಮ್-65 ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಕಂಡುಬಂದ ದೃಶ್ಯಗಳಿವು. ಸುಮಾರು ಒಂದು ವರ್ಷಕ್ಕೂ ಹೆಚ್ಚಿನ ಅವ ಧಿಯ ಬಳಿಕ ಬೈಕ್ ರ್ಯಾಲಿ ನಡೆದಿದ್ದು ನೆರೆದಿದ್ದ ಜನರನ್ನು ಬೈಕ್ ರೈಡರ್ ರಂಜಿಸಿದರು. ಅಂಕುಡೊಂಕಾಗಿ ನಿರ್ಮಿಸಿದ್ದ ಟ್ರ್ಯಾಕ್‌ನಲ್ಲಿ ವಿವಿಧ ಬ್ರ್ಯಾಂಡ್‌ನ ಬೈಕ್‌ಗಳು ಭೋರ್ಗರೆವ ಶಬ್ದದಲ್ಲಿ ತಮ್ಮ ಗುರಿಮುಟ್ಟಲು ಮುನ್ನುಗುತ್ತಿದ್ದರೆ, ನೋಡುಗರು ಶಿಳ್ಳೆ, ಚಪ್ಪಾಳೆ ಮೂಲಕ ಬೈಕ್ ರೈಡರ್ಗಳನ್ನು ಪ್ರೋತ್ಸಾಹಿಸಿದರು.
ಬೈಕ್‌ರ್ಯಾಲಿಗೆ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಚಾಲನೆ ನೀಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸದೃಢ ಆರೋಗ್ಯ ಮತ್ತು ಮನೋಲ್ಲಾಸಕ್ಕೆ ಗ್ರಾಮೀಣ ಕ್ರೀಡೆಗಳಂತೆ ದ್ವಿಚಕ್ರ ವಾಹನ ರೇಸ್ ಕೂಡ ಹೆಚ್ಚು ಖುಷಿ ನೀಡುತ್ತದೆ. ಜಿಲ್ಲೆ ಪರಿಸರತ್ಮಾಕವಾಗಿ ವೈವಿಧ್ಯವನ್ನು ಹೊಂದಿದ್ದು, ಬೆಟ್ಟಗುಡ್ಡಗಳ ಆರೋಹಣ ಸ್ಪರ್ಧೆ, ಸೈಕ್ಲಿಂಗ್ ಸೇರಿದಂತೆ ಇತರೆ ಕ್ರೀಡಾಕೂಟ ಆಯೋಜನೆಗೆ ಸೂಕ್ತ ಸ್ಥಳವಾಗಿದೆ. ಪ್ರತೀ ವರ್ಷದಂತೆ ಈವರ್ಷವು ಬೈಕ್‌ರೇಸ್ ಆಯೋಜಿಸಿರುವುದು ಖುಷಿಯ ವಿಚಾರವಾಗಿದೆ ಎಂದರು.
ಕಾರ್ಯಕ್ರಮ ಆಯೋಜಕರಾದ ಷಹಬುದ್ದೀನ್ ಮಾತನಾಡಿ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಮ್ರಾನ್ ಪಿಂಟೋ ಸಹಕಾರದಲ್ಲಿ ದ್ವಿಚಕ್ರ ವಾಹನದ ರೇಸ್ ಆಯೋಜನೆ ಮಾಡಲಾಗುತ್ತಿದ್ದು, ಶಿವಮೊಗ್ಗ, ಕೇರಳ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ಅಂತಾರಾಜ್ಯಗಳಿಂದ ಸ್ಪ ರ್ಧಿಗಳು ಭಾಗವಹಿಸಿದ್ದಾರೆ. ಯುವಜನತೆ ಆಸಕ್ತಿಯಿಂದ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಆಯೋಜಕರಲ್ಲಿ ಸಂತಸ ತಂದಿದ್ದು, ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ.20ಸಾವಿರ ಹಾಗೂ ಪಾರಿತೋಷಕ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡುವುದಾಗಿ ತಿಳಿಸಿದರು.
ವಕೀಲ ಮಜೀದ್‌ಖಾನ್ ಮಾತನಾಡಿ, ಕಾಫಿಲ್ಯಾಂಡ್ ಟೀಮ್ 65 ಡಟ್ ìರೇಸ್ ದ್ವಿಚಕ್ರವಾಹನ ರೇಸ್ ಅತ್ಯಂತ ರೋಮಾಂಚನ ಕ್ರೀಡೆಯಾಗಿದ್ದು ಸ್ಪ ರ್ಧಿಗಳು ಹಾಗೂ ನೋಡುಗರಿಗೆ ಮನತಣಿಸಲಿದ್ದು, ಜಿಲ್ಲೆಯಲ್ಲಿ ಇಂತಹ ರೇಸ್ ಸ್ಪರ್ಧೆಗಳು ಹೆಚ್ಚಾಗಿ ಆಯೋಜನೆಗೊಳ್ಳುವುದರಿಂದ ಇದಕ್ಕೆ ಪ್ರೋತ್ಸಾಹ ದೊರೆತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅನುಕೂಲವಾದಂತಾಗುವುದು ಎಂದರು. ಸಂತೋಷ್‌ಖಾದರ್, ರಿಜ್ವಾನ್‌ಖಾನ್, ದ್ವಿಚಕ್ರ ವಾಹನ ಮಾಲೀಕರು ಹಾಗೂ ವಾಹನ ದುರಸ್ತಿದಾರರ ಸಂಘದ ಅಧ್ಯಕ್ಷ ಸಮೀರ್‌ಪಾಶಾ ಇದ್ದರು.