ಕುಂದಾಪುರ: ಹೆಮ್ಮಾಡಿ ಸಮೀಪದ ಜಾಲಾಡಿಯ ರಾ.ಹೆದ್ದಾರಿ 66 ರಲ್ಲಿ ಬೈಕ್ ಹಾಗೂ ಕಾರು ಢಿಕ್ಕಿಯಾಗಿ, ಬೈಕ್ ಸವಾರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ದಾನಿ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಕಾರು ಇದಾಗಿದ್ದು, ಅವರು ಪತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ ಮನೆ ಕಡೆಗೆ ವಾಪಾಸು ಬರುತ್ತಿದ್ದಾಗ, ಅಪಘಾತ ಸಂಭವಿಸಿದೆ.
ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಏಕಾಏಕಿ ಅಡ್ಡಲಾಗಿ ಬಂದ ಬೈಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಕಾರು ಚಾಲಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ದುರಂತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.
ಘಟನೆಗೆ ಬೈಕ್ ಸವಾರನ ನಿರ್ಲಕ್ಷದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಬೈಕ್ ಸವಾರನ ಮುಖಭಾಗಕ್ಕೆ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ, ಕಾರಿನಲ್ಲಿದ್ದ ಕೃಷ್ಣಮೂರ್ತಿ ಮಂಜ ಮತ್ತವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಮುಂಬದಿಯ ಎರಡೂ ಏರ್ ಬಲೂನ್ಸ್ ಹೊರಗಡೆ ಬಂದಿದ್ದು, ಬೈಕ್ ರಸ್ತೆ ವಿಭಾಜಕವೇರಿದೆ.
ಸ್ಥಳದಲ್ಲಿದ್ದ ಹೈವೇ ಪ್ಯಾಟ್ರೋಲ್ ನ ಎಎಸ್ಐ ಹರೀಶ್ ಹಾಗೂ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.