Advertisement

ಫಲ ನೀಡಿದ “ರಾತ್ರಿ ತರಗತಿ’ಪ್ರಯೋಗ

06:15 AM May 14, 2018 | Team Udayavani |

ಉಪ್ಪುಂದ: ಎಸೆಸೆಲ್ಸಿ ವಿದ್ಯಾರ್ಥಿಗಳ ಶೇ. 100 ಫಲಿತಾಂಶಕ್ಕಾಗಿ ವಿವಿಧ ರೀತಿಯ ತರಬೇತಿ, ಹೆಚ್ಚುವರಿ ತರಗತಿಗಳನ್ನು ಮಾಡುವುದು ಸಾಮಾನ್ಯ. ಬಿಜೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಾತ್ರಿ ಶಾಲೆ ನಡೆಸಿರುವುದು ಫ‌ಲಕೊಟ್ಟಿದೆ.  

Advertisement

ನಗರಗಳಂತೆ ಇಲ್ಲಿನ ಶಿಕ್ಷಕರು ರಾತ್ರಿ ತರಗತಿ ಆರಂಭಿಸುವ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗಿ ಸಂಜೆ ಹಾಗೂ ರಾತ್ರಿ ಸಮಯವನ್ನು ಓದಲು, ಬರೆಯಲು ಅವಕಾಶ ಕಲ್ಪಿಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಯೋಜನೆ ರೂಪಿಸಿದ್ದರು.  

ಎಲ್ಲ ವಿದ್ಯಾರ್ಥಿಗಳು ಪಾಸ್‌ 
ಕಳೆದ ನವೆಂಬರ್‌ ತಿಂಗಳಿನಿಂದ ರಾತ್ರಿ ತರಗತಿಯನ್ನು ಆರಂಭಿಸಲಾಗಿತ್ತು. ಒಟ್ಟು 19 ವಿದ್ಯಾರ್ಥಿಗಳಲ್ಲಿ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. 

ಜಯಶ್ರೀ ಎಸ್‌.589 ಅಂಕ ಗಳಿಸಿ ಪ್ರಥಮ ಸ್ಥಾನಿಯಾದರೆ, ದ್ವಿತೀಯ ಮನೋಜ 574, ತೃತೀಯ ಸುಷ್ಮ 570 ಅಂಕ ಪಡೆದಿದ್ದಾರೆ. 
 
ಕಲಿಕೆಯಲ್ಲಿ ಹಿಂದುಳಿದವರಿಗೆ ಆದ್ಯತೆ 
ಈ ವಿಶೇಷ ತರಗತಿಯಲ್ಲಿ ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರಾಧಾನ್ಯತೆ ನೀಡಲಾಗಿತ್ತು.  
ವಿದ್ಯಾರ್ಥಿಗಳಿಗೆ ನೈತಿಕ ಪ್ರೋತ್ಸಾಹ, ಮಾನಸಿಕ ಧೈರ್ಯ ತುಂಬುವುದರೊಂದಿಗೆ ಅವರ ಕಲಿಕೆ ಬಗ್ಗೆ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವ ಜತೆಗೆ ಪ್ರತಿ ವಿದ್ಯಾರ್ಥಿಯ ಕಲಿಕೆ ಮೇಲೆ ನಿಗಾ ವಹಿಸುವುದೂ ಶಿಕ್ಷಕರ ಉದ್ದೇಶವಾಗಿತ್ತು. 

ಈ ಶಾಲೆ ವಿಶಾಲ ಮೈದಾನ, ಉತ್ತಮ ಪರಿಸರ, ಸ್ಮಾರ್ಟ್‌ ಕ್ಲಾಸ್‌ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ. 

Advertisement

ಆಟದೊಂದಿಗೆ ಪಾಠ
ವಿದ್ಯಾರ್ಥಿಗಳಿಗೆ ಸಂಜೆ ಆಟವಾಡಲು ಅವಕಾಶ ನೀಡಲಾಗಿತ್ತು. ಬಳಿಕ ಸಂಜೆ 5ರಿಂದ 9ರವರೆಗೆ ವೇಳಾಪಟ್ಟಿ ಪ್ರಕಾರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು.

ಪ್ರಯತ್ನಕ್ಕೆ ಸಿಕ್ಕ ಫಲ
ಎಲ್ಲ ಶಿಕ್ಷಕರ, ವಿದ್ಯಾರ್ಥಿಗಳ ಶ್ರಮದ ಜತೆ ಹೆತ್ತವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ನಿರೀಕ್ಷೆಗಿಂತ ಹೆಚ್ಚು ಅಂಕ ಪಡೆದಿರುವುದು ನಮ್ಮ ಶ್ರಮದ ಸಾರ್ಥಕತೆ ಎನ್ನಿಸಿದೆ. ಈ ಪ್ರಯೋಗ ಮುಂದುವರಿಸುತ್ತೇವೆ.  
-ಸುಬ್ರಹ್ಮಣ್ಯ ಮಧ್ದೋಡಿ,ಪ್ರಭಾರ ಮುಖ್ಯ ಶಿಕ್ಷಕ

ರಾತ್ರಿ ತರಗತಿ ಸಹಕಾರಿ
ರಾತ್ರಿ ತರಗತಿಯಿಂದಾಗಿ ಸಮಯವನ್ನು ಸದುಪಯೋಗಿಸಿಕೊಳ್ಳಲು ಸಹಾಯಕವಾಯಿತು. ಶಿಕ್ಷಕರ ನಿರಂತರ ಪ್ರೋತ್ಸಾಹವೇ ನಮಗೆ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು. ಎಲ್ಲ ಸ್ನೇಹಿತರ ಪರವಾಗಿ ಶಿಕ್ಷಕರಿಗೆ ಕೃತಜ್ಞತೆ ತಿಳಿಸುತ್ತೇವೆ.
– ಮನೋಜ,10ನೇ ತರಗತಿ ವಿದ್ಯಾರ್ಥಿ

ಉತ್ತಮ ಸಾಧನೆ
ಶಿಕ್ಷಕರ ಹೊಸ ಪ್ರಯತ್ನದಿಂದ  ಈ ಸಾಧನೆ ಸಾಧ್ಯವಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪಾಸ್‌ ಆಗಿರುವುದು ಉತ್ತಮ ಬೆಳವಣಿಗೆ ಶಿಕ್ಷಕರಿಗೆ ನಮ್ಮ ಸಹಕಾರ ಸದಾ ಇರುತ್ತದೆ.
– ಸುಬ್ರಹ್ಮಣ್ಯ ಖಾರ್ವಿ,ಹೆತ್ತವರು

– ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next