Advertisement

ಇಲ್ಲಿದೆ ಪುರಾತನ ಶಿವ ದೇವಾಲಯ: 12 ವರ್ಷಕೊಮ್ಮೆ ಇಲ್ಲಿನ ಶಿವಲಿಂಗಕ್ಕೆ ಸಿಡಿಲು ಬಡಿಯುತ್ತೆ!

04:26 PM Sep 24, 2022 | ಸುಧೀರ್ |

ಹಿಮಾಚಲ ಪ್ರದೇಶ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಹಿಮದಿಂದ ಆವೃತವಾಗಿರುವ ಅಲ್ಲಿನ ಗುಡ್ಡಗಾಡು ಪ್ರದೇಶಗಳು… ತಣ್ಣನೆಯ ವಾತಾವರಣ.. ಅಲ್ಲಿನ ಜನರ ಜೀವನ ಕ್ರಮ ಹೀಗೆ ಹಲವು… ಆದರೆ ಇಲ್ಲಿ ಅದನ್ನೆಲ್ಲಾ ಮೀರಿದ ಒಂದು ಸಂಗತಿ ಇದೆ, ಅದು ಇಲ್ಲಿನ ಬೆಟ್ಟದ ಮೇಲಿರುವ ಪುರಾತನ ಶಿವ ದೇವಾಲಯ, ಇದನ್ನು ‘ಬಿಜಿಲಿ ಮಹದೇವ್’ ದೇವಸ್ಥಾನವೆಂದೂ ಕರೆಯುತ್ತಾರೆ. ಅರೆ ಇದೇನಿದು ಬಿಜಿಲಿ ಮಹಾದೇವ ದೇವಸ್ಥಾನ, ಏನಿದರ ವಿಶೇಷತೆ, ಈ ಹೆಸರು ಬಂದಿದ್ದಾದರೂ ಯಾಕಾಗಿ ಈ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳೋಣ…

Advertisement

ಹಿಮಾಚಲ ಪ್ರದೇಶದ ಕುಲು ಎಂಬ ಸುಂದರ ಪ್ರದೇಶದಲ್ಲಿ ಸುಮಾರು 2,460 ಅಡಿ ಎತ್ತರದಲ್ಲಿ ಈ ನಿಗೂಢ ಶಿವನ ದೇವಾಲಯವಿದೆ, ಈ ದೇವಸ್ಥಾನದಲ್ಲಿ ಕೆಲವೊಂದು ಪವಾಡಗಳು ನಡೆಯುತ್ತವೆಯಂತೆ ಅಲ್ಲದೆ ಈ ದೇವಸ್ಥಾನದಲ್ಲಿ ದೊಡ್ಡ ಶಿವನ ಲಿಂಗವಿದೆ ಆ ಲಿಂಗಕ್ಕೆ ಪ್ರತಿ ಹನ್ನೆರಡು ವರ್ಷಕೊಮ್ಮೆ ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಯುತ್ತಂತೆ, ಸಿಡಿಲಿನ ಹೊಡೆತಕ್ಕೆ ಶಿವಲಿಂಗವೇ ತುಂಡಾಗುತ್ತದೆಯಂತೆ ಆದರೆ ಈ ದೇವಸ್ಥಾನದ ಅರ್ಚಕರು ಲಿಂಗದ ತುಂಡುಗಳನ್ನು ಬೆಳೆ ಕಾಳು ಮತ್ತು ಬೆಣ್ಣೆ ಸೇರಿಸಿ ಮತ್ತೆ ತುಂಡಾದ ಲಿಂಗವನ್ನು ಜೋಡಿಸುತ್ತಾರಂತೆ ಇದು ನಡೆದು ಒಂದೆರಡು ತಿಂಗಳಲ್ಲಿ ಶಿವಲಿಂಗ ಮತ್ತೆ ಮೊದಲಿನ ರೂಪವೇ ಪಡೆಯುತ್ತದೆಯಂತೆ ಎಂದು ಇಲ್ಲಿನ ಭಕ್ತರು ಹಾಗೂ ಊರಿನ ಜನರು ಹೇಳಿಕೊಂಡಿದ್ದಾರೆ.

ಹೀಗೆ ಆಗುತ್ತೆ ಎಂದರೆ ನೀವು ನಾವು ನಂಬಲು ಸಾಧ್ಯವಿಲ್ಲ ಆದರೆ ಇದು ನಂಬಲೇಬೇಕೆನ್ನುತ್ತದೆ ಇಲ್ಲಿ ಅಳವಡಿಸಿದ ಕ್ಯಾಮೆರಾ, ಈ ಕ್ಯಾಮೆರಾದಲ್ಲಿ ಇಲ್ಲಿನ ಘಟನಾವಳಿಗಳು ಸ್ಪಷ್ಟವಾಗಿ ಗೋಚರಿಸುತ್ತವೆಯಂತೆ. ಆದರೆ ಇಲ್ಲಿ ನಡೆಯುತ್ತಿರುವ ನಿಗೂಢತೆ ಮಾತ್ರ ಇಂದಿಗೂ  ಊರಿನವರಿಗೂ ಬಗೆಹರಿದಿಲ್ಲ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ ಸಿಡಿಲು ಬಡಿದ ವೇಳೆ ಇಲ್ಲಿನ ಶಿವಲಿಂಗಕ್ಕೆ ಮಾತ್ರ ಹಾನಿಯಾಗುತ್ತದೆ ಬಿಟ್ಟರೆ ದೇವಾಲಯದ ಕಟ್ಟಡ ಹಾಗೂ ಸುತ್ತ ಮುತ್ತ ಯಾವುದೇ ವಸ್ತುಗಳಿಗೂ ಹಾನಿಯಾಗುವುದಿಲ್ಲ. ಇದರ ಹಿಂದಿನ ರಹಸ್ಯವನ್ನು ಜನರು ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಲ್ಲಿ ದೇವಸ್ಥಾನದ ಕುರಿತು ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇದುವರೆಗೂ ಸಿಕ್ಕಿಲ್ಲ.

ಸ್ಥಳ ಪುರಾಣ :
ಕುಲಂತ್ ಎಂಬ ದೈತ್ಯ ರಾಕ್ಷಸ ಈ ಪ್ರದೇಶದಲ್ಲಿ ವಾಸಿಸುತ್ತಿದ್ದನೆಂದು ಪುರಾಣಗಳು ಹೇಳುತ್ತವೆ. ಒಮ್ಮೆ ಆತ ಇಲ್ಲಿನ ಎಲ್ಲಾ ಜೀವಿಗಳನ್ನು ಕೊಲ್ಲುವ ಉದ್ದೇಶದಿಂದ ಇಲ್ಲಿ ಹರಿಯುವ ವ್ಯಾಸ ನದಿಯ ನೀರನ್ನೇ ಆವಿ ಮಾಡಿದ್ದನಂತೆ ಇದರಿಂದ ಕೋಪಗೊಂಡ ಮಹಾದೇವ ತನ್ನ ತ್ರಿಶೂಲದಿಂದ ರಾಕ್ಷಸನ ತಲೆಗೆ ಹೊಡೆದಿದ್ದನಂತೆ ಈ ವೇಳೆ ನೆಲಕ್ಕೆ ಬಿದ್ದ ರಾಕ್ಷಸನ ದೇಹ ಪರ್ವತವಾಗಿ ಮಾರ್ಪಟ್ಟಿದೆಯಂತೆ ರಾಕ್ಷಸನ ಸಂಹಾರದ ಬಳಿಕ ಭಗವಾನ್ ಶಿವನು ಇಂದ್ರ ದೇವನಿಗೆ ಪ್ರತಿ 12 ವರ್ಷಗಳಿಗೊಮ್ಮೆ ರಾಕ್ಷಸ-ಸದೃಶ ಪರ್ವತದ ಮೇಲೆ ಮಿಂಚು ಹರಿಸಲು ಆದೇಶಿಸಿದ್ದನಂತೆ ಅದರಂತೆ ಅಂದಿನಿಂದ ಇಂದಿನವರೆಗೆ ಪ್ರತಿ 12 ವರ್ಷಗಳಿಗೊಮ್ಮೆ ಈ ಅದ್ಭುತಗಳು ನಡೆಯುತ್ತವೆ ಎಂದು ಹೇಳಲಾಗಿದೆ.

Advertisement

ಜನರಿಗೆ ಯಾವುದೇ ಅಪಾಯವಿಲ್ಲ :

ಅಚ್ಚರಿಯೆಂದರೆ, ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿರುವ ಶಿವಲಿಂಗವು ಸಿಡಿಲಿನ ಹೊಡೆತಕ್ಕೆ ಸಿಲುಕಿ ಹಾನಿಯಾಗುತ್ತದೆ ಆದರೆ ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮಾತ್ರ ಇದುವರೆಗೂ ಯಾವುದೇ ಹಾನಿಯಾಗಿಲ್ಲ ತಮಗೆ ಬಂದ ಅಪಾಯವನ್ನೆಲ್ಲಾ ಶಿವನೇ ತಡೆಯುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆ.

ದೇವಸ್ಥಾನಕ್ಕೆ ಹೋಗುವುದು ಹೇಗೆ?
ಶಿವ ದೇವಾಲಯ ಕುಲುವಿನಿಂದ ಸುಮಾರು 20 ಕಿಮೀ ದೂರದಲ್ಲಿದ್ದು, 3 ಕಿಮೀ ಟ್ರಕ್ಕಿಂಗ್ ಮೂಲಕ ದೇವಸ್ಥಾನವನ್ನು ತಲುಪಬಹುದಾಗಿದೆ. ಟ್ರಕ್ಕಿಂಗ್ ಹೋಗುವವರಿಗೆ ಈ ಸ್ಥಳ ತುಂಬಾ ಖುಷಿ ಕೊಡುತ್ತದೆ. ನದಿ, ಕಣಿವೆಗಳು ಹೆಚ್ಚು ಆನಂದಿಸುವವರಿಗೆ ಈ ಸ್ಥಳವು ಉತ್ತಮವಾಗಿದೆ.

ಪವಿತ್ರ ಬಿಜಿಲಿ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲು ಮಾರ್ಚ್ ನಿಂದ ಸೆಪ್ಟೆಂಬರ್ ಸೂಕ್ತ ಸಮಯ. ಹವಾಮಾನ ಉತ್ತಮವಾಗಿರುವ ಕಾರಣವೊಂದಾದರೆ, ಮಹಾಶಿವರಾತ್ರಿಯ ಕಾಲವಾಗಿರುವುದರಿಂದ ದೇವಸ್ಥಾನಕ್ಕೆ ಹೆಚ್ಚಿನ ಪ್ರವಾಸಿಗಳು, ಭಕ್ತರು ಬರುತ್ತಾರೆ, ಅಲ್ಲದೆ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಎಲ್ಲಾ ಪ್ರದೇಶ ಹಿಮದಿಂದ ಆವೃತವಾಗಿರುತ್ತವೆ ಜೊತೆಗೆ ಮಳೆಯೂ ಜೋರಾಗಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗುವುದು ಸಾಮಾನ್ಯ. ಸಾಧ್ಯವಾದರೆ ನೀವೂ ಒಮ್ಮೆ ಭೇಟಿ ನೀಡಿ…

– ಸುಧೀರ್ ಆಚಾರ್ಯ

 

Advertisement

Udayavani is now on Telegram. Click here to join our channel and stay updated with the latest news.

Next