ಬಿಹಾರ: ಐದು ವರ್ಷದ ಬಾಲಕನಿಗೆ ಶಿಕ್ಷಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದು, ಪ್ರಜ್ಞೆ ತಪ್ಪಿ ಬಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮರವಂತೆ ಬೀಚ್ ಗೆ ಕಾರು ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
5 ವರ್ಷದ ಬಾಲಕನಿಗೆ ಶಿಕ್ಷಕ ಕೋಲಿನಿಂದ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಶಿಕ್ಷಕ ಹೊಡೆದ ರಭಸಕ್ಕೆ ಕೋಲು ಎರಡು ತುಂಡಾಗಿತ್ತು. ನಂತರ ಕೈಯಿಂದ ಬಾಲಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ತನಗೆ ಹೊಡೆಯಬೇಡಿ ಎಂದು ಬಾಲಕ ಅಂಗಲಾಚಿದರೂ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಇದರ ಪರಿಣಾಮ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ವರದಿ ವಿವರಿಸಿದೆ.
ಪಾಟ್ನಾದ ಜಯ ಕೋಚಿಂಗ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ಪ್ರಜ್ಞೆ ತಪ್ಪಿ ಬಿದ್ದ ಬಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ವಿಷಯ ತಿಳಿದ ನಂತರ ಸ್ಥಳೀಯರು ಶಿಕ್ಷಕ ಛೋಟು ಎಂಬಾತನಿಗೆ ಥಳಿಸಿರುವುದಾಗಿ ವರದಿ ತಿಳಿಸಿದೆ.
“ಶಿಕ್ಷಕ ಛೋಟು ಬಿ.ಪಿ (ಬ್ಲಡ್ ಪ್ರೆಶರ್)ಯಿಂದ ಬಳಲುತ್ತಿರುವುದಾಗಿ ಕೋಚಿಂಗ್ ಸೆಂಟರ್ ಮಾಲೀಕ ಅಮರ್ ಕಾಂತ್ ಕುಮಾರ್ ಸಮಜಾಯಿಷಿ ನೀಡಿದ್ದಾರೆ. ಈ ಘಟನೆ ಬಗ್ಗೆ ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಾಗಿ ವರದಿ ತಿಳಿಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.