Advertisement

Bihar ಮುನಿಸು ಶಮನ; RJD 26, ಕಾಂಗ್ರೆಸ್ಸಿಗೆ 9: ಪಪ್ಪುಗೆ ತಪ್ಪಿದ ಟಿಕೆಟ್‌!

12:56 AM Mar 30, 2024 | Team Udayavani |

ಪಟ್ನಾ: ಬಿಹಾರದಲ್ಲಿ ಇಂಡಿಯಾ ಕೂಟದ ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳ ನಡುವೆ ಸೀಟು ಹಂಚಿಕೆ ಪೂರ್ಣಗೊಂಡಿದೆ. ಬಿಹಾರದ 40 ಕ್ಷೇತ್ರಗಳ ಪೈಕಿ 26ರಲ್ಲಿ ಆರ್‌ಜೆಡಿ, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಐ(ಎಂಎಲ್‌) 3 ಮತ್ತು ಸಿಪಿಐ ಹಾಗೂ ಸಿಪಿಎಂ ತಲಾ 1 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಈ ಮೂಲಕ, ಇತ್ತೀಚೆಗೆ ಸೀಟು ಹಂಚಿಕೆಗೆ ಮುನ್ನವೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಿದ್ದ ಆರ್‌ಜೆಡಿ ನಡೆಯಿಂದ ಮಿತ್ರಪಕ್ಷಗಳಲ್ಲಿ ಮೂಡಿದ್ದ ಮನಸ್ತಾಪಕ್ಕೆ ತೆರೆಬಿದ್ದಿದೆ.

Advertisement

ಪಟ್ನಾದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಎಂಪಿ ಮನೋಜ್‌ ಕುಮಾರ್‌ ಝಾ, ಬಿಹಾರ ಕಾಂಗ್ರೆಸ್‌ ಅಧ್ಯಕ್ಷ ಅಖೀಲೇಶ್‌ ಪ್ರಸಾದ್‌ ಯಾದವ್‌ ಎಡಪಕ್ಷಗಳ ನಾಯಕರು ಸೀಟು ಹಂಚಿಕೆಯ ವಿಷಯವನ್ನು ಪ್ರಕಟಿಸಿದರು.

ಎ.19ರ ಮೊದಲ ಹಂತದ ಚುನಾವಣೆಯಲ್ಲಿ ಬಿಹಾರದ ಗಯಾ, ಔರಂಗಾಬಾದ್‌, ಜಾಮುಯಿ ಮತ್ತು ನಾವಡಾ ಕ್ಷೇತ್ರಗಳಿಗೆ ಆರ್‌ಜೆಡಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದೆ. ಮತ್ತೂಂದೆಡೆ, ಸಿಪಿಐ ಮತ್ತು ಸಿಪಿಎಂ ಬೇಗುಸರಾಯಿ ಮತ್ತು ಖಗಾರಿಯಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿವೆ.

ಪಪ್ಪು ಯಾದವ್‌ಗೆ ತಪ್ಪಿದ ಟಿಕೆಟ್‌!

ಕಾಂಗ್ರೆಸ್‌ ಕಣ್ಣಿಟ್ಟಿದ್ದ ಪೂರ್ಣಿಯಾ ಕ್ಷೇತ್ರವು ಈಗ ಆರ್‌ಜೆಡಿ ಪಾಲಾಗಿದೆ. ಆದರೆ ಇದೇ ಕ್ಷೇತ್ರದಲ್ಲಿ 3 ಬಾರಿ ಗೆದ್ದಿದ್ದ ಪಪ್ಪು ಯಾದವ್‌ ಅವರು ಈ ಬಾರಿಯೂ ಪೂರ್ಣಿಯಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಈಗ ಪೂರ್ಣಿಯಾ ಕ್ಷೇತ್ರವು ಆರ್‌ಜೆಡಿ ಪಾಲಾಗಿದೆ. ಈ ಕ್ಷೇತ್ರಕ್ಕೆ ಆರ್‌ಜೆಡಿ ಅಭ್ಯರ್ಥಿಯನ್ನು ಹೆಸರಿಸಿದ್ದರೂ, ನಾಮಪತ್ರ ಸಲ್ಲಿಸುವುದಾಗಿ ಪಪ್ಪು ಯಾದವ್‌ ಹೇಳಿದ್ದಾರೆ. ಕಳೆದ ವಾರವಷ್ಟೇ ಪಪ್ಪು ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜತೆ ವಿಲೀನಗೊಳಿಸಿದ್ದರು.

Advertisement

ರಾಜಸ್ಥಾನದ 2 ಕ್ಷೇತ್ರದ ಕೈ ಅಭ್ಯರ್ಥಿಗಳು ಬದಲು
ಹೊಸದಿಲ್ಲಿ: ಕಾಂಗ್ರೆಸ್‌ ಕರ್ನಾಟಕದ 4 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶುಕ್ರವಾರ ರಾತ್ರಿ ಘೋಷಿಸಿದ್ದು, ರಾಜಸ್ಥಾನದ 2 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿದೆ. ಇದು ಕಾಂಗ್ರೆಸ್‌ನ 9ನೇ ಪಟ್ಟಿ.ರಾಜಸ್ಥಾನದ ರಾಜ್‌ಸಮಂದ್‌ ಕ್ಷೇತ್ರಕ್ಕೆ ಡಾ. ದಾಮೋದರ್‌ ಗುರ್ಜರ್‌ಗೆ ಟಿಕೆಟ್‌ ಘೋಷಿಸಲಾಗಿದೆ. ಈ ಮೊದಲು ಸುದರ್ಶನ್‌ ರಾವತ್‌ ಅವರಿಗೆ ನೀಡಲಾಗಿತ್ತು. ಅದೇ ರೀತಿ ಭಿಲಾವರ್‌ ಕ್ಷೇತ್ರಕ್ಕೆ ಹೆಸರಿಸಲಾಗಿದ್ದ ಡಾ| ದಾಮೋದರ್‌ ಗುರ್ಜರ್‌ ಅವರ ಬದಲಿಗೆ ಮಾಜಿ ಕೇಂದ್ರ ಸಚಿವ ಸಿ.ಪಿ.ಜೋಶಿಗೆ ಟಿಕೆಟ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next