ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳಲು ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನ ಎಲ್ಲಾ ಶಾಸಕರು ಒಮ್ಮತದಿಂದ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ: ಕಾಂಗ್ರೆಸ್ ಟೀಕೆ
ಎನ್ ಡಿಎ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳಲು ಮಂಗಳವಾರ (ಆಗಸ್ಟ್ 09) ಕರೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ಸಂಜೆ 4ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲು ನಿತೀಶ್ ಕುಮಾರ್ ಸಮಯಾವಕಾಶ ಕೇಳಿರುವುದಾಗಿ ವರದಿ ವಿವರಿಸಿದೆ.
ಎನ್ ಡಿಎ ಜತೆಗಿನ ಮೈತ್ರಿ ಕಡಿದುಕೊಂಡ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ. ಗವರ್ನರ್ ಭೇಟಿಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಬಿಹಾರದಲ್ಲಿ 2017ರಲ್ಲಿಯೂ ಕೂಡಾ ಆರ್ ಜೆಡಿ ಸಖ್ಯ ತೊರೆದು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ರಾತ್ರೋರಾತ್ರಿ ಜೆಡಿಯು ಹೊಸ ಸರ್ಕಾರ ರಚಿಸಿತ್ತು. ಇದೀಗ ಮತ್ತೆ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ವಿಪಕ್ಷಗಳ ಜತೆ ಕೈಜೋಡಿಸಲು ಜೆಡಿಯು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಬಿಹಾರದಲ್ಲಿನ ದಿಢೀರ್ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಕೂಡಾ ಸಂಜೆ 5ಗಂಟೆಗೆ ಸಭೆ ಕರೆದಿರುವುದಾಗಿ ಮೂಲಗಳು ಹೇಳಿವೆ. ಇಂದು ಬೆಳಗ್ಗೆ ಪಾಟ್ನಾದಲ್ಲಿ ಲಾಲೂ ಪ್ರಸಾದ್ ಯಾದವ್ ನಿವಾಸದಲ್ಲಿ ರಾಷ್ಟ್ರೀಯ ಜನತಾ ದಳದ ಶಾಸಕರು, ಪಕ್ಷದ ಮುಖಂಡರು ಭೇಟಿ ನೀಡಿ, ಮಾತುಕತೆ ನಡೆಸಿದ್ದರು.