ನವದೆಹಲಿ:ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನಷ್ಟು ರೈತರು ಗಡಿ ಭಾಗಕ್ಕೆ ಆಗಮಿಸುತ್ತಿರುವುದಾಗಿ ವರದಿ ತಿಳಿಸಿದೆ.
ಏತನ್ಮಧ್ಯೆ ಗುರುವಾರ(ಡಿಸೆಂಬರ್ 17, 2020)ದಂದು ಬಿಹಾರದ ಸಿವಾನ್ ಪ್ರದೇಶದಿಂದ 60ವರ್ಷದ ಸತ್ಯದೇವ್ ಮಾಂಜಿ ಬರೋಬ್ಬರಿ ಒಂದು ಸಾವಿರ ಕಿಲೋ ಮೀಟರ್ ಸೈಕಲ್ ನಲ್ಲಿ ಪ್ರಯಾಣಿಸಿ ದೆಹಲಿ ಗಡಿಗೆ ಬಂದು ತಲುಪುವ ಮೂಲಕ ರೈತರ ಪ್ರತಿಭಟನೆಗೆ ಕೈಜೋಡಿಸಿರುವುದಾಗಿ ವರದಿ ವಿವರಿಸಿದೆ.
ಸಿವಾನ್ ನಿಂದ ಸೈಕಲ್ ನಲ್ಲಿ ಹೊರಟಿದ್ದ ಮಾಂಜಿ ಬರೋಬ್ಬರಿ 11 ದಿನಗಳ ನಂತರ ದೆಹಲಿಗೆ ಬಂದು ತಲುಪಿದ್ದು, ಕೇಂದ್ರ ಸರ್ಕಾರ ಮೂರು ಹೊಸ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
60ವರ್ಷದ ಸತ್ಯದೇವ್ ರೈತರು ಪ್ರತಿಭಟನೆ ನಡೆಸುತ್ತಿದ್ದ ದೆಹಲಿ-ಹರ್ಯಾಣ ಗಡಿಭಾಗದ ಟಿಖ್ರಿ ಪ್ರದೇಶಕ್ಕೆ ಬಂದು ತಲುಪಿರುವುದಾಗಿ ಎಎನ್ ಐ ವರದಿ ಮಾಡಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಪಂಜಾಬ್, ಹರ್ಯಾಣ ರೈತರು ನವೆಂಬರ್ 26ರಿಂದ ರಾಜಧಾನಿ ದೆಹಲಿಯ ವಿವಿಧ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.