ಪಾಟ್ನಾ: ಬಿಹಾರದ ದಿನಗೂಲಿ ನೌಕರ ಮನೋಜ್ ಯಾದವ್‌ಗೆ ಕಳೆದ ಶನಿವಾರ ಅಚ್ಚರಿಯೊಂದು ಕಾದಿತ್ತು!
ಆತನ ಮನೆಗೆ ಬಂದ ಆದಾಯ ತೆರಿಗೆ ಅಧಿಕಾರಿಗಳು 14 ಕೋಟಿ ರೂ. ತೆರಿಗೆ ಪಾವತಿಸಿ ಎಂದು ನೋಟಿಸ್ ನೀಡಿದರು.
ಆಗ ಮನೋಜ್, ನಿಮಗೆ ಅಷ್ಟು ತೆರಿಗೆ ಕಟ್ಟಲು ನನ್ನಲ್ಲಿರುವ ಅಷ್ಟೂ ಆಸ್ತಿಯನ್ನು ಹತ್ತಾರು ಬಾರಿ ಮಾರಿದರೂ ಸಾಧ್ಯವಿಲ್ಲ. ತಾನೊಬ್ಬ ದಿನಗೂಲಿ ನೌಕರ ಎಂದು ಹೇಳಿದ್ದಾರೆ. ಆತನ ಪರಿಸ್ಥಿತಿ ನೋಡಿ ಅಧಿಕಾರಿಗಳಿಗೇ ದಿಗಿಲಾಗಿದೆ. ಈ ವೇಳೆ ಆತ ಕೆಲ ಮಾಹಿತಿಗಳನ್ನು ನೀಡಿದ್ದಾನೆ.
ಕೊರೊನಾಗೂ ಮುನ್ನ ತಾನು ಪಂಜಾಬ್, ಹರ್ಯಾಣ, ದೆಹಲಿಗಳಲ್ಲಿ ಕೆಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಅವರು ತನ್ನ ಪ್ಯಾನ್ ಕಾರ್ಡ್, ಆಧಾರ್ ಸಂಖ್ಯೆ ಪಡೆದಿದ್ದರು. ಅವರೇ ತನ್ನ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಮೋಸ ಮಾಡಿರಬಹುದು ಎಂದು ಆರೋಪಿಸಿದ್ದಾರೆ.
ವಿಚಿತ್ರವೆಂದರೆ ಈತನ ಹೆಸರಲ್ಲಿರುವ ಈ ಖಾತೆಯಲ್ಲಿ ಸತತವಾಗಿ ಕೋಟ್ಯಂತರ ರೂ. ವ್ಯವಹಾರ ನಡೆದಿದೆ!