ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಅಭಿಯಾನದ ‘ಜಲ್-ಜೀವನ್-ಹರಿಯಾಲಿ’ (ಹಸಿರು ಜಲಜೀವನ) ಅಂಗವಾಗಿ ಇಂದು ಬಕ್ಸರ್ ನಿಂದ ಜಾರ್ಖಂಡ್ ರಾಜ್ಯದ ಗಡಿಭಾಗ ಭಗಲ್ಪುರದವರೆಗೆ ಗಂಗಾನದಿಯ ತೀರದುದ್ದಕ್ಕೂ ಸುಮಾರು 18,340 ಕಿಲೋ ಮೀಟರ್ ಉದ್ದಕ್ಕೆ ನಿರ್ಮಿಸಲಾದ ಬೃಹತ್ ಮಾನವ ಸರಪಳಿ ಹೊಸ ದಾಖಲೆಗೆ ಪಾತ್ರವಾಯಿತು.
ಸುಮಾರು 4.27 ಕೋಟಿ ಜನರು ಈ ಮಾನವ ಸರಪಳಿ ನಿರ್ಮಾಣದಲ್ಲಿ ಕೈಜೋಡಿಸಿದ್ದರು ಮತ್ತು ಇವರೆಲ್ಲರ ಸಹಕಾರದಿಂದ 18.34ಸಾವಿರ ಕಿಲೋ ಮೀಟರ್ ಉದ್ದದ ಈ ಮಾನವ ಸರಪಳಿ ನಿರ್ಮಾಣವಾಗುವ ಮೂಲಕ ಈ ಹಿಂದಿನ ದಾಖಲೆಯನ್ನು ಇದು ಅಳಿಸಿ ಹಾಕಿದೆ ಎಂಬ ಮಾಹಿತಿಯನ್ನು ಬಿಹಾರ ಸರಕಾರದ ಮುಖ್ಯಕಾರ್ಯದರ್ಶಿ ದೀಪಕ್ ಕುಮಾರ್ ಅವರು ನೀಡಿದ್ದಾರೆ.
2017ರಲ್ಲಿ ನಡೆಸಲಾಗಿದ್ದ ಮಾನವ ಸರಪಳಿ 11,285 ಕಿಲೋ ಮೀಟರ್ ಉದ್ದ ನಿರ್ಮಾಣಗೊಂಡಿತ್ತು. ಇನ್ನಿ 2018ರಲ್ಲಿ ವರದಕ್ಷಿಣೆ ಹಾಗೂ ಬಾಲ್ಯವಿವಾಹ ಪದ್ದತಿಗಳನ್ನು ವಿರೋಧಿಸಿ ನಿರ್ಮಾಣಗೊಂಡಿದ್ದ ಮಾನವ ಸರಪಳಿ13,660 ಕಿಲೋಮೀಟರ್ ಉದ್ದಕ್ಕೆ ನಿರ್ಮಾಣಗೊಂಡಿತ್ತು. ಈ ಬಾರಿ ಇದಕ್ಕಿಂತ 20% ಅಧಿಕ ಉದ್ದದ ಅಂದರೆ 16,200 ಕಿಲೋ ಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು.
ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ 45 ಲಕ್ಷ ಜನರು ಇದರಲ್ಲಿ ಭಾಗವಹಿಸಿದರೆ ವಾರ್ಡ್ ಮಟ್ಟಗಳಲ್ಲಿ ಒಂದು ಕೊಟಿ 13 ಲಕ್ಷದ 44 ಸಾವಿರ ಜನರು ಒಟ್ಟಾಗುವ ಮೂಲಕ ಈ ಬೃಹತ್ ಮಾನವ ಸರಪಳಿ ನಿರ್ಮಾಣಗೊಂಡಿತು. ಇನ್ನು 57 ಲಕ್ಷ ವಿದ್ಯಾರ್ಥಿಗಳು ಹಾಗೂ 76 ಸಾವಿರ ಬೋಧಕ ಸಿಬ್ಬಂದಿಯೂ ಸಹ ಈ ಬೃಹತ್ ಮಾನವ ಸರಪಳಿಯ ಭಾಗವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಅಭಿಯಾನಕ್ಕೆ ಸುಮಾರು 15-16 ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಗಿದ್ದು ಇಷ್ಟು ಉದ್ದದ ಮಾನವ ಸರಪಳಿಯ ಚಿತ್ರಣವನ್ನು ಸೆರೆಹಿಡಿಯಲು ನಾಲ್ಕು ಹೆಲಿಕಾಫ್ಟರ್ ಗಳು, ಮೂರು ವಿಮಾನಗಳು ಹಾಗೂ 100 ಡ್ರೋಣ್ ಗಳನ್ನು ಬಳಸಿಕೊಳ್ಳಲಾಗಿತ್ತು.
ಮಾನವ ಸರಪಳಿ ರಚನೆಯ ಸಂದರ್ಭದಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆಯೂ ನಡೆದಿದ್ದು, ಮೃತರ ರಕ್ತ ಸಂಬಂಧಿಗಳಿಗೆ ರಾಜ್ಯ ಸರಕಾರ ತಲಾ 04 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.