ನವದೆಹಲಿ:ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಲಿಗಢ್ ಮುಸ್ಲಿಂ ಯೂನಿರ್ವಸಿಟಿ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಮಸ್ಕೂರ್ ಉಸ್ಮಾನಿಯನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿರುವುದನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶುಕ್ರವಾರ ಪ್ರಶ್ನಿಸಿದ್ದು, ಒಂದು ವೇಳೆ ಕಾಂಗ್ರೆಸ್ ಪಕ್ಷ ಮಹಮ್ಮದ್ ಅಲಿ ಜಿನ್ನಾ ಅವರನ್ನು ಬೆಂಬಿಸುತ್ತದೆಯೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಹಾರದ ದರ್ಬಾಂಗ್ ಜಿಲ್ಲೆಯ ಜೇಲ್ ಕ್ಷೇತ್ರದಿಂದ ಉಸ್ಮಾನಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಒಂದು ವೇಳೆ ಜವಾಹರಲಾಲ್ ನೆಹರು ಯೂನಿರ್ವಸಿಟಿ (ಜೆಎನ್ ಯು) ಸಂಶೋಧನಾ ವಿದ್ಯಾರ್ಥಿ, ದೆಹಲಿ ಗಲಭೆ ಪ್ರಕರಣದ ಆರೋಪಿ ಶಾರ್ಜೀಲ್ ಇಮಾಮ್ ಕಾಂಗ್ರೆಸ್ ಮೈತ್ರಿಯ ಮಹಾಘಟಬಂಧನದ ಸ್ಟಾರ್ ಪ್ರಚಾರಕ ಆಗಬಹುದು ಎಂದು ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಜೇಲ್ ಕ್ಷೇತ್ರದ ಅಭ್ಯರ್ಥಿ ಜಿನ್ನಾನ ಬೆಂಬಲಿಸುತ್ತಾರೆಯೇ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಮಹಾಘಟಬಂಧನ ಮುಖಂಡರು ಈ ದೇಶದ ಜನತೆಗೆ ಉತ್ತರ ನೀಡಬೇಕು. ಅಲ್ಲದೇ ಕಾಂಗ್ರೆಸ್ ಮತ್ತು ಮಹಾಘಟಬಂಧನ್ ಕೂಡಾ ಒಂದು ವೇಳೆ ಜಿನ್ನಾ ಅವರನ್ನು ಬೆಂಬಲಿಸುತ್ತದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ಶಾರ್ಜೀಲ್ ಇಮಾಮ್ ನಿಮ್ಮ ಸ್ಟಾರ್ ಪ್ರಚಾರಕನೇ? ಎಂಬುದಾಗಿ ಸಿಂಗ್ ಪ್ರಶ್ನಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅಲಿಘಡ್ ಮುಸ್ಲಿಮ್ ಯೂನಿರ್ವಸಿಟಿಯ ಹಾಲ್ ನಲ್ಲಿ ಪಾಕಿಸ್ತಾನ ಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರ ಹಾಕುವ ಬಗ್ಗೆ 2018ರಲ್ಲಿ ವಿವಾದ ಎದ್ದಿತ್ತು. ಅಂದು ಎಎಂಯುಎಸ್ ಯು ಅಧ್ಯಕ್ಷನಾಗಿದ್ದ ಉಸ್ಮಾನಿ ಭಾವಚಿತ್ರ ಹಾಕುವುದನ್ನು ಸಮರ್ಥಿಸಿಕೊಂಡಿರುವುದಾಗಿ ಸಿಂಗ್ ಹಳೆಯ ಘಟನೆಯನ್ನು ಉಲ್ಲೇಖಿಸಿದ್ದಾರೆ.
ಅಕ್ಟೋಬರ್ 28ರಿಂದ ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ನವೆಂಬರ್ 7ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆ ನಡೆಯಲಿದೆ. ನವೆಂಬರ್ 3 ಎರಡನೇ ಹಂತದ ಚುನಾವಣೆ, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.