ಬೆಂಗಳೂರು: ಇತ್ತೀಚೆಗೆ ಹಿಂದಿ ಬಿಗ್ ಬಾಸ್ ಓಟಿಟಿ ಮುಕ್ತಾಯ ಕಂಡಿದೆ. ಇತ್ತ ತಮಿಳು ಹಾಗೂ ತೆಲುಗು ಬಿಗ್ ಬಾಸ್ ಶೀಘ್ರ ಆರಂಭವಾಗಲಿದೆ ಎನ್ನಲಾಗುತ್ತಿದೆ. ಈ ನಡುವೆ ಕನ್ನಡ ಬಿಗ್ ಬಾಸ್ (BIGG BOSS) ಆರಂಭಕ್ಕೂ ತೆರೆಮರೆಯಲ್ಲಿ ಸಿದ್ದತೆ ಜೋರಾಗಿ ನಡೆಯುತ್ತಿದೆ.
ಕಿರುತೆರೆ, ಬೆಳ್ಳಿತೆರೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸೋಶಿಯಲ್ ಮೀಡಿಯಾ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ, ವಿವಾದದ ಮೂಲಕ ಸುದ್ದಿಯಾದ ಒಂದಷ್ಟು ಜನರು ಸ್ಪರ್ಧಿಗಳಾಗಿ ಕ್ಯಾಮರಾ ಕಣ್ಗಾವಲಿನ ʼಬಿಗ್ ಬಾಸ್ʼ ಮನೆಯೊಳಗೆ ಎಂಟ್ರಿ ಆಗುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ -11(Bigg Boss Kannada -11) ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ ಕೊನೆಯ ಅಥವಾ ಮೊದಲ ವಾರದಲ್ಲಿ ಹೊಸ ಸೀಸನ್ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ನಡುವೆ ದೊಡ್ಮನೆಗೆ ಎಂಟ್ರಿ ಆಗುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ನಡುವೆ ಬಿಗ್ ಬಾಸ್ ನಿರೂಪಕರ ಬಗ್ಗೆ ಚರ್ಚೆ ನಡೆಯುತ್ತಿದೆ. ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ (Kiccha sudeep) ನಡೆಸಿಕೊಡುತ್ತಾರೆ. ಕಿಚ್ಚ ಅವರ ನಿರೂಪಣೆಯ ಖದರ್ ಹಾಗೂ ಖಡಕ್ ಲುಕ್ ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗುತ್ತದೆ. ಬಿಗ್ ಬಾಸ್ ಗೆ ಹೆಚ್ಚಿನ ವೀಕ್ಷಕರಿದ್ದಾರೆ. ಸುದೀಪ್ ಕೂಡ ಕಾರ್ಯಕ್ರಮವನ್ನು ಸಖತ್ ಆಗಿ ನಡೆಸಿಕೊಡುತ್ತಾರೆ.
ಆದರೆ ಹೊಸ ಸೀಸನ್ ಆರಂಭವಾಗುತ್ತದೆ ಎನ್ನುವ ಮಾತಿನ ನಡುವೆಯೇ ಆ ಹೊಸ ಸೀಸನ್ ಗೆ ನಿರೂಪಕ ಕೂಡ ಬದಲಾಗಲಿದ್ದಾರೆ ಎನ್ನುವ ಮಾತು ಕೂಡ ಹರಿದಾಡುತ್ತಿದೆ.
ಕಳೆದ ಸೀಸನ್ ನಲ್ಲಿ ಕಿಚ್ಚ ಸುದೀಪ್ ಅವರು ಸಿನಿಮಾ ಚಿತ್ರೀಕರಣದ ಕಾರಣ, ಕೆಲ ಎಪಿಸೋಡ್ ಗಳನ್ನು ಮಿಸ್ ಮಾಡಿಕೊಂಡಿದ್ದರು. ಈ ಬಾರಿ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎನ್ನುವ ಭರವಸೆ ವೀಕ್ಷಕರಿಗಿದೆ. ಆದರೆ ಹರಿದಾಡುತ್ತಿರುವ ವರದಿಗ ಪ್ರಕಾರ ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
ಅವರು ಈ ಬಾರಿ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಎನ್ನಲಾಗುತ್ತಿದೆ. ಅವರ ಜಾಗಕ್ಕೆ ಹೊಸ ನಿರೂಪಕ ಎಂಟ್ರಿ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯಾರಾಗಬಹುದು ನ್ಯೂ ಹೋಸ್ಟ್..?: ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ನಿರೂಪಣೆಗೆ ಫಿದಾ ಆಗದವರಿಲ್ಲ. ಮನೆಯಲ್ಲಿನ ಸ್ಪರ್ಧಿಗಳು ತಪ್ಪು ಮಾಡಿದರೆ ಅವರಿಗೆ ನ್ಯಾಯ, ನೀತಿಯ ಪಾಠವನ್ನು ಕಿಚ್ಚ ಮಾಡುತ್ತಿದ್ದರು. ಈ ಬಾರಿ ಅವರ ಬದಲಿಗೆ ಈಗಾಗಲೇ ಕಿರುತೆರೆ ಹೋಸ್ಟ್ ಆಗಿ ಕಾಣಿಸಿಕೊಂಡಿರುವ ನಟ ರಮೇಶ್ ಅರವಿಂದ್ (Ramesh Aravind) ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದಲ್ಲದೆ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಕೂಡ ಬಿಗ್ ಬಾಸ್ ಹೋಸ್ಟ್ ಮಾಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ.
ʼಕಾಂತಾರ ಪ್ರೀಕ್ವೆಲ್ʼ ಗಾಗಿ ಪರಿಶ್ರಮ ಪಡುತ್ತಿರುವ ರಿಷಬ್ ಬಿಡುವು ಮಾಡಿಕೊಂಡು ಬಿಗ್ ಬಾಸ್ ನಡೆಸಿಕೊಡಲು ಸಾಧ್ಯವಿಲ್ಲವೆಂದು ಕೆಲ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಯಾವುದಕ್ಕೂ ಬಿಗ್ ಬಾಸ್ ಆಯೋಜಕರೇ ಇದಕ್ಕೆ ಸ್ಪಷ್ಟನೆ ನೀಡುವವರೆಗೆ ಊಹಾಪೋಹಾಗಳು ಹೆಚ್ಚಾಗಿಯೇ ಹರಿದಾಡುವ ಸಾಧ್ಯತೆಯಿದೆ.
ಸೀಸನ್ 10ರಲ್ಲಿ ಹತ್ತಾರು ವಿವಾದಗಳು.. ಕಳೆದ ಸೀಸನ್ ಅಂದರೆ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮದಲ್ಲಿ ಹತ್ತಾರು ವಿವಾದಗಳು ಎಬ್ಬಿದ್ದವು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಆರೋಪದ ಮೇಲೆ ವರ್ತೂರು ಸಂತೋಷ್ ಅವರನ್ನು ಅರಣ್ಯ ಅಧಿಕಾರಿಗಳು ಬಿಗ್ ಬಾಸ್ ಮನೆಯೊಳಗೆ ಬಂದೇ ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿ ಅಂದು ಟಿವಿ ಮಾಧ್ಯಮಗಳಲ್ಲಿ ಹತ್ತಾರು ದಿನ ಸುದ್ದಿಯಾಗಿತ್ತು. ಸಮುದಾಯವೊಂದರ ಬಗ್ಗೆ ತನಿಷಾ ಕುಪ್ಪಂಡ ಅವರು ಅವಮಾನವಾಗುವ ರೀತಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಟಾಸ್ಕ್ ವೊಂದರಲ್ಲಿ ಕಣ್ಣಿಗೆ ಸೋಪಿನ ನೀರು ತಾಗಿ ಸಂಗೀತಾ , ಡ್ರೋನ್ ಪ್ರತಾಪ್ ಆಸ್ಪತ್ರೆಗೆ ಸೇರಿದ್ದರು.