Advertisement

ಬಿಗ್‌ಬೆನ್‌

06:05 AM Sep 03, 2017 | Harsha Rao |

ಲಂಡನ್‌ ನಗರದಲ್ಲಿ ದಿನವೂ ಕೇಳಿಸುವ ಮತ್ತು ಎಷ್ಟು ಕೇಳಿದರೂ ಅಸ್ಪಷ್ಟ, ಅಪರಿಚಿತ ಎನಿಸುವ ಶಬ್ದ ಒಂದಿದೆ. ಕಲರವಗಳ ನಡುವೆಯೂ ಆತ್ಮೀಯ ಹಾಗೂ  ಪರಿಚಿತವಾಗಿರುವ ರವ !  ಬಿಗ್‌ ಬೆನ್‌ ಎನ್ನುವ ಹೆಸರಿನಿಂದ ಮನೆಮಾತಾಗಿರುವ ಗಡಿಯಾರದ ಶಬ್ದವದು.

Advertisement

ಲಂಡನ್‌ನ ಹೃದಯ ಭಾಗದಲ್ಲಿ ಥೇಮ್ಸ… ನದಿಯ ಸೇತುವೆಯ ಪಕ್ಕದಲ್ಲಿ  ಇರುವ  ಎಲಿಜಬೆತ್‌ ಗೋಪುರ, ಆ ಗೋಪುರದ ತುದಿಯಲ್ಲಿ  1859ರಲ್ಲಿ ಸ್ಥಾಪನೆಗೊಂಡ, ಆಂಗ್ಲರ ಹೆಮ್ಮೆಯ ಮಹಾನ್‌ ಗಡಿಯಾರ ! ಬೆಂಜಮಿನ್‌ ಎನ್ನುವಾತ ಆ ಕಾಲದಲ್ಲಿ ಗಡಿಯಾರ ಪ್ರತಿಷ್ಠಾಪನೆ ಕಾರ್ಯದ ಉಸ್ತುವಾರಿ ವಹಿಸಿದ್ದನಂತೆ. ಅದರ ನೆನಪಿನಲ್ಲಿಯೇ ಮಹಾನ್‌ ಗಡಿಯಾರಕ್ಕೆ ಬಿಗ್‌ ಬೆನ್‌ ಎನ್ನುವ ಹೆಸರು ಬಂತಂತೆ!

320 ಅಡಿ ಎತ್ತರದಲ್ಲಿ ಈ ವೃತ್ತಾಕಾರದ ಗಡಿಯಾರವಿದೆ.  ಬ್ರಿಟನ್‌ನ ಸಂಸತ್‌ ಕಟ್ಟಡದ ಭಾಗವಾಗಿ ಹೋಗಿರುವ ಮಹಾನ್‌ ಗಡಿಯಾರವನ್ನು ನೋಡಲು ಸಾವಿರಗಟ್ಟಲೆ ಜನ ದಿನವೂ ಬರುತ್ತಾರೆ. ಲಂಡನ್‌ಗೆ ಪ್ರವಾಸ ಬಂದ ಯಾರೇ ಇರಲಿ ಬಿಗ್‌ ಬೆನ್‌ ಎನ್ನುವ ಗಡಿಯಾರದ ಹಿನ್ನೆಲೆಯಲ್ಲಿ ಚಿತ್ರ ತೆಗೆಯದೆ ಮರಳಿದರೆ ಲಂಡನ್‌ಗೆ ಪ್ರವಾಸ ಹೋಗಿದ್ದೇ ಸುಳ್ಳು ಎಂಬಂಥ ಪ್ರತೀತಿ ಇದೆ. ಬಿಗ್‌ ಬೆನ್‌ ಬರಿಯ ಒಂದು ಗಡಿಯಾರವಲ್ಲ, ಲಂಡನ್‌ನ  ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪ್ರತಿನಿಧಿಯೂ ಹೌದು. 

ಈ ಗಡಿಯಾರದ ಮುಖ ಪರಿಚಯಕ್ಕಾಗಿ ನಿಮಿಷದ ಮುಳ್ಳಿನ ಉದ್ದ ಹದಿನಾಲ್ಕು ಮೀಟರು, ಗಂಟೆಯ ಮುಳ್ಳಿನ ಉದ್ದ ಒಂಬತ್ತು ಮೀಟರು ಎಂದರೂ ಸಾಕು; ಅದರ ಗಾತ್ರ ಕಣ್ಣೆದುರು ನಿಲ್ಲುತ್ತದೆ. ಗಡಿಯಾರ ನಡೆಯುವುದು ಹೇಗೆ, ಸದ್ದು ಮಾಡುವುದು ಎಲ್ಲಿಂದ ಎಂದು ಹುಡುಕಹೊರಟವರು ಗೋಪುರದ ಮೇಲೆ, ಗಡಿಯಾರದ ಹಿನ್ನೆಲೆಯಲ್ಲಿ ಇರುವ ಯಂತ್ರಗಳೇ ತುಂಬಿದ ಕೋಣೆಯ ಬಗ್ಗೆ ತಿಳಿಯಬೇಕು. ಬಿಗ್‌ಬೆನ್‌ ಗಡಿಯಾರವನ್ನು ನಡೆಸುವ ಯಂತ್ರಮಂಡಲ ಇರುವುದು ಇÇÉೇ. ಇದೊಂದು ವಿದ್ಯುತ್‌ಚಾಲಿತ ಗಡಿಯಾರವೂ ಅಲ್ಲ, ಶುಷ್ಕ ಕೋಶದಿಂದ ನಡೆಯುವ ವಾಚ್‌ ಕೂಡ ಅಲ್ಲ. ಕೈಯಿಂದ ಕೀಲಿ  ಕೊಟ್ಟು  ನಡೆಯುವ, ಸೂಕ್ತ  ನಿರ್ವಹಣೆಗೆ  ಆಗಾಗ ಕೀಲೆಣ್ಣೆ  ಬೇಕಾಗುವ  ಹಳೆಯ ಕಾಲದ ಯಂತ್ರ ತಂತ್ರ !  ಗಡಿಯಾರದ ಹಿನ್ನಲೆಯಲ್ಲಿರುವ ಈ ಕೊಠಡಿಯಲ್ಲಿ ದೊಡ್ಡ ಗಂಟೆ ಇದೆ, ಮತ್ತೆ ಯಾಂತ್ರಿಕ ಗಡಿಯಾರವೊಂದು ನಡೆಯಲು ಬೇಕಾಗುವ ಯಂತ್ರಗಳ ವ್ಯೂಹವೂ ಇದೆ. ಜನರಿಗೆ ಕಾಣುವ ದೊಡ್ಡ ಗಡಿಯಾರವೂ ಅದರ ಹಿನ್ನೆಲೆಯಲ್ಲಿ ಕೆಲಸ ಮಾಡುವ, ಸಂಕೀರ್ಣ ಯಂತ್ರಗಳೂ ಮತ್ತು ಬೃಹತ್‌ ಗಂಟೆಯೂ ಮತ್ತೆ ಇವೆಲ್ಲವುಗಳ ನಡುವೆ ಹೊಂದಾಣಿಕೆ ಇದೆ, ಸುತ್ತಿಗೆಯೊಂದು ಸಮಯದ ಲೆಕ್ಕಾಚಾರದಲ್ಲಿ ಹದಿನಾಲ್ಕು ಟನ್‌ ತೂಕದ ದೊಡ್ಡ ಗಂಟೆಗೆ ಪ್ರತಿ ಗಂಟೆಗೆ ಎಷ್ಟು ಗಂಟೆಯೋ ಅಷ್ಟು ಬಾರಿ ಬಡಿಯುತ್ತದೆ. ಅದು ಇಡೀ ಲಂಡನ್‌ ನಗರಕ್ಕೆ ಕೇಳಿಸುವಂಥ ಶಬ್ದ. 

ಲಂಡನ್‌ಗೆ ಇರುವ ಅಸಂಖ್ಯ ಚಾರಿತ್ರಿಕ ರೂಪಗಳಲ್ಲಿ ಮತ್ತು  ಅವುಗಳೊಳಗಿನ ಕಥೆಗಳಲ್ಲಿ ಬಿಗ್‌ ಬೆನ್‌ ಕೂಡ ಸೇರಿಕೊಂಡಿದೆ.  1859ರಲ್ಲಿ ಬಿಗ್‌ ಬೆನ್‌ ಗಂಟೆಯನ್ನು ಗೋಪುರದ ಮೇಲೆ ಕುಳ್ಳಿರಿಸಲು 16 ಕುದುರೆಗಳ ಗಾಡಿಯಲ್ಲಿ ಹೊತ್ತು ತರಲಾಗಿತ್ತು. ಗಡಿಯಾರ ಹಾಗೂ ಗಂಟೆಯ ಗಾತ್ರದ ಬಗ್ಗೆ, ಆ ಕಾಲದಲ್ಲಿ ಇಂತಹ ಗಡಿಯಾರವೊಂದನ್ನು ವಿನ್ಯಾಸಗೊಳಿಸುವಲ್ಲಿ ತಂತ್ರಜ್ಞರು ಪಟ್ಟ ಶ್ರಮದ ಬಗ್ಗೆ ಬರಹದ ದಾಖಲೆ ಇದೆ.  

Advertisement

ಇಂಥ ಗಡಿಯಾರವನ್ನು ಯಾರೋ ಇದ್ದಕ್ಕಿದ್ದಂತೆ ಸ್ತಬ್ಧವಾಗಿಸಿಬಿಟ್ಟರೆ…!?  ಅದೊಂದು ಘಟನೆ ಮೊನ್ನೆ ಸಂಭವಿಸಿಯೇ ಬಿಟ್ಟಿತು. ತೀವ್ರ  ಆಕ್ಷೇಪಗಳು, ಟೀಕೆಗಳ ನಡುವೆ ಬಿಗ್‌ ಬೆನ್‌ ಗಡಿಯಾರವನ್ನು ತುರ್ತಾಗಿ  ನಿಲ್ಲಿಸಲಾಯಿತು. ಲಂಡನ್‌ನ ಸಮಯಪಾಲಕ ಗಂಟೆ ಸುಮಾರು ನಾಲ್ಕು ವರ್ಷಗಳ ಕಾಲ ಮೌನವಾಗಿರುತ್ತದೆ ಎನ್ನುವ ಹೇಳಿಕೆ ನೀಡಲಾಯಿತು. ಸುದ್ದಿ ಕೇಳಿ, ಗಡಿಯಾರಕ್ಕೆ ತಾತ್ಕಾಲಿಕ ವಿದಾಯ ಹೇಳಬಂದ ಸಾವಿರಾರು ಜನರ ಸಮ್ಮುಖದಲ್ಲಿ  ಮಧ್ಯಾಹ್ನ ಹನ್ನೆರಡು ಗಂಟೆಯ ಸದ್ದಿನೊಂದಿಗೆ ಗಡಿಯಾರವನ್ನು ನಿಲ್ಲಿಸಲಾಯಿತು. ತುರ್ತಾಗಿ ಆಗಬೇಕಾಗಿದ್ದ ಎಲಿಜಿಬೆತ್‌ ಗೋಪುರದ “ಜೀರ್ಣೋದ್ಧಾರ’ದ ಕೆಲಸವೇ ಈ ಗಡಿಯಾರ ಸ್ತಬ್ಧಗೊಳ್ಳಲು ಕಾರಣ. ಗೋಪುರ ಹತ್ತಿ ದುರಸ್ತಿ ಮಾಡಬೇಕಾದ ಕಾರ್ಮಿಕರಿಗೆ  ಗಂಟೆ-ಗಂಟೆಗೂ  ಶಬ್ದ ಮಾಡುವ ಈ ಬಿಗ್‌ ಬೆನ್‌ನಿಂದ ಅಪಾಯ ಒದಗಬಹುದು ಎನ್ನುವ ಕಳಕಳಿಯಿಂದಾಗಿ ಈ ಗಡಿಯಾರವನ್ನು ಸುಮ್ಮನಾಗಿಸುವ ತೀರ್ಮಾನಕ್ಕೆ ಬರಲಾಗಿತ್ತು. ಬಿಗ್‌ ಬೆನ್‌ ಗಡಿಯಾರದ ಹಿಂದಿರುವ ಗಂಟೆ ಬಡಿದಾಗಲೆಲ್ಲ 140 ಡೆಸಿಬೆಲ್‌ ತೀವ್ರತೆಯ ಸದ್ದು ಹೊಮ್ಮುತ್ತದೆ. ಗೋಪುರದ ಮೇಲೆ ಹತ್ತಿ ಮುಚ್ಚುಗೆಯ ನವೀಕರಣ ಮಾಡುವ ಕೆಲಸಗಾರರು ಈ ಗಂಟೆಯ ಹತ್ತಿರದÇÉೇ ಕೆಲಸ ಮಾಡಬೇಕಾಗಿರುವುದರಿಂದ ಕಿವಿಗೆ ಶಬ್ದನಿರೋಧಕ ಧರಿಸಿಯೇ ಧರಿಸುತ್ತಾರೆ. ಆದರೆ, ಮನುಷ್ಯರ ಕಿವಿಗೆ ಪರಿಮಿತವಾದ ಸದ್ದಿಗಿಂತ ಹೆಚ್ಚು ಶಬ್ದ ಕಿವಿಯನ್ನು ಪ್ರವೇಶಿಸಿದರೆ ಆಗುವ ಆಪಾಯದ ಅಂದಾಜಿನಿಂದ ಗೋಪುರದ ರಿಪೇರಿ ಕೆಲಸ ಮುಗಿಯುವವರೆಗೂ ಗಡಿಯಾರವನ್ನು  ನಿಲ್ಲಿಸುವುದೆಂದು  ಸರಕಾರ ನಿರ್ಣಯವನ್ನು ಕೈಗೊಂಡಿದೆ. 158 ವರ್ಷಗಳ ಹಿಂದೆ ಚಾಲನೆ ಪಡೆದ ಬಿಗ್‌ ಬೆನ್‌ ಯಾಂತ್ರಿಕ ಗಡಿಯಾರವನ್ನು ಪ್ರತಿದಿನವೂ ನಿರ್ವಹಿಸುವ ಗೊಡವೆ ಬೇಡ ಎಂದುಕೊಂಡು, ಇದೇ ಸುಸಂದರ್ಭ ಎಂದು ಭಾವಿಸಿ, ಸುಸಜ್ಜಿತವಾದ ಹೊಸ ಇಲೆಕ್ಟ್ರಾನಿಕ್‌ ಡಿಜಿಟಲ್‌ ಗಡಿಯಾರದಿಂದ ಬದಲಿಸಬಹುದಿತ್ತು.

ಬದಲಿಸುವುದು ಕಷ್ಟವೂ ಅಲ್ಲ. ಆದರೆ, ಈ ಮಹಾನ್‌ ಗಡಿಯಾರಕ್ಕೆ ಚಾರಿತ್ರಿಕ ಮಹಣ್ತೀವಿದೆ. ಇದರ ಒಂದೊಂದು ವಿಷಯವನ್ನೂ ಹೇಳಿಕೊಂಡು ಹೆಮ್ಮೆ ಪಡುವ ಇಂಗ್ಲಿಶರಿಗೆ ಶತಮಾನದ ಹಿಂದಿನ ತಮ್ಮ ದೇಶದ ಯಂತ್ರಶಾಸ್ತ್ರ ಆಧಾರಿತ ತಂತ್ರಜ್ಞಾನದ ಕುರಿತು ಅಪಾರ ಗೌರವವಿದೆ. 

ನಿತ್ಯ ಚಲಿಸುತ್ತಿದ್ದ ಗಡಿಯಾರ ಮಾತ್ರ ಈಗ ನಿಂತಿದೆ. ಆದರೆ, ಇಲ್ಲಿನವರ ಅಭಿಮಾನದ ಆವರಣದಲ್ಲಿ ಅದು ಚಲಿಸುತ್ತಲೇ ಇದೆ.

ಒಂದು ಕಡೆ ಚಾರಿತ್ರಿಕ ಅರಿವು , ಇನ್ನೊಂದು ಕಡೆ ಕೆಲಸಗಾರರ ಆರೋಗ್ಯ ಮತ್ತು ಸುರಕ್ಷತೆಯ ಹೊಣೆ- ಈ ದ್ವಂದ್ವದಲ್ಲಿ ತಾನು ಕಾರ್ಮಿಕರ ಹಿತದೃಷ್ಟಿಯನ್ನೇ ಎತ್ತಿ ಹಿಡಿದಿದ್ದೇನೆ ಎಂದು ಸರಕಾರ ಹೇಳುತ್ತದೆ. ಅದಕ್ಕೆ ಇಲ್ಲಿನ ವಿರೋಧ ಪಕ್ಷದವರ ಆಕ್ಷೇಪವಿದೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ  ಜರ್ಮನಿಯ  ನಾಝಿಗಳ ಬಾಂಬಿನ ಸದ್ದಿಗೆ ಹೆದರದ ಬ್ರಿಟಿಷರು ಈಗ ಗಂಟೆಯ ಸಣ್ಣ ಸದ್ದಿಗೋಸ್ಕರ ಅದನ್ನು ನಿಲ್ಲಿಸಬಹುದೇ ಎಂದು ಭಾವಾವೇಶದಲ್ಲಿ ಮಾತಾಡುತ್ತಾರೆ. ನಾಲ್ಕು ವರ್ಷಗಳ ಕಾಲ ತಮ್ಮ ಮಹಾನ್‌ ಗಡಿಯಾರವನ್ನು ಸ್ಥಗಿತಗೊಳಿಸುವುದು ರಾಷ್ಟ್ರೀಯ ಅಪಮಾನ ಎಂದು ಆರೋಪಿಸುತ್ತಾರೆ. ವಿರೋಧ ಪಕ್ಷವಲ್ಲದೆ, ಸಾಮಾನ್ಯ ಪೌರರಿಂದಲೂ ತೀವ್ರ ಆಕ್ಷೇಪಕ್ಕೆ ಗುರಿಯಾದ ಬಳಿಕ, ಪ್ರಧಾನಿ ಥೆರೆಸಾ ಮೇ ನಾಲ್ಕು ವರ್ಷಗಳಿಗಿಂತ ಮೊದಲೇ ಗೋಪುರದ ದುರಸ್ತಿ ಕಾರ್ಯವನ್ನು ಮುಗಿಸುವ ಸಾಧ್ಯತೆಯನ್ನು ಪರೀಶೀಲಿಸುತ್ತೇವೆ  ಎಂದಿ¨ªಾರೆ. ಮುಂದಿನ 2021ರವರೆಗಿನ ಅವಧಿಯಲ್ಲಿ ಹೊಸ ವರ್ಷದ ದಿನ, ಮಹಾಯುದ್ಧದ ಹುತಾತ್ಮರ ನೆನಪಿನ ದಿನದಂತಹ ರಾಷ್ಟ್ರೀಯ ಆಚರಣೆಯ ದಿನಗಳ ಮಟ್ಟಿಗೆ ಗಡಿಯಾರವನ್ನು ಮತ್ತೆ ಕೀಲಿ ಕೊಟ್ಟು ನಡೆಸಲಾಗುವುದು ಎಂದೂ ಹೇಳಿದ್ದಾರೆ. ಗಡಿಯಾರವನ್ನು  ನಿಲ್ಲಿಸಿದ್ದಕ್ಕೆ ತುಂಬಾ ಬೇಸರ ಮಾಡಿಕೊಂಡವರಿಗೆ ಇದು ಸಣ್ಣ ಸಮಾಧಾನ ನೀಡಿದೆ.  ಗೋಪುರದ ಮುಚ್ಚುಗೆ ಸರಿಪಡಿಸಲು ನಾಲ್ಕು ವರ್ಷ ಬೇಕಾಗುವುದು, ದುರಸ್ತಿ ಕೆಲಸದ ಯೋಜನೆಯ ಕರಡು ಅನುಮತಿ ಪಡೆಯುತ್ತಿ¨ªಾಗ ಗಡಿಯಾರವನ್ನು ನಿಲ್ಲಿಸಬೇಕಾದೀತು ಎನ್ನುವ ಊಹೆ ಕೂಡ ಇಲ್ಲದಿದ್ದುದು ಹಾಗೂ ಒಂದು ವೇಳೆ ಗಡಿಯಾರ ನಿಲ್ಲಿಸದೇ ಗೋಪುರದ ಕೆಲಸ ಮುಂದುವರಿಸಲು ಪರ್ಯಾಯ ಮಾರ್ಗವೇನಾದರೂ  ಇದೆಯೋ ಎಂದು ಪರಿಶೀಲಿಸದಿರುವುದು ಆಡಳಿತದ ಅದಕ್ಷತೆ ಮತ್ತು ಜಡತ್ವವನ್ನು ಸೂಚಿಸುತ್ತದೆ ಎಂಬ ಆರೋಪವೂ ಇದೆ. ಆದರೆ, ಇನ್ನೊಂದೆಡೆ ದುರಸ್ತಿ ಕೆಲಸಗಾರರ ಬಗೆಗಿನ ಕಾಳಜಿಯ ಬಗ್ಗೆ ಪ್ರಶಂಸೆಯೂ ಇದೆ.
ಅಂತೂ ಬಿಗ್‌ಬೆನ್‌ ಮತ್ತೆ ಸುದ್ದಿಯಲ್ಲಿದೆ!

– ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next