ಲಕ್ನೋ: ಉತ್ತರಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭರ್ಜರಿ ಜಯಗಳಿಸಿದೆ. ಆದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:3ನೇ ಹಂತದ ಅನ್ ಲಾಕ್ ಘೋಷಣೆ : ಬಾರ್, ದೇವಸ್ಥಾನಕ್ಕೆ ಅನುವು : ಸಿನಿ ಪ್ರಿಯರಿಗೆ ಶಾಕ್
75 ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಕೇವಲ 7 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವ ಮುನ್ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
2016ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 75 ಸ್ಥಾನಗಳಲ್ಲಿ ಯಾದವ್ ಅವರ ಸಮಾಜವಾದಿ ಪಕ್ಷ 60 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಚುನಾವಣಾ ವಿಶ್ಲೇಷಣೆಯ ಪ್ರಕಾರ, ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ಮುನ್ಸೂಚನೆಯ ಫಲಿತಾಂಶವಾಗಿರುತ್ತದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಕೂಡಾ ಅಗ್ನಿಪರೀಕ್ಷೆಯಾಗಿದ್ದು, ಇದೀಗ ಬಿಜೆಪಿ ಜಯಭೇರಿ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.