ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಮತ್ತು ಹಲ್ಲೆ ಆರೋಪ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಖಾಸಗಿ ವಿಚಾರಕ್ಕೆ ಈ ಹೈಡ್ರಾಮಾ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ವರ್ತೂರು ಪ್ರಕಾಶ್ ಅವರಿಂದ ದೂರು ಪಡೆಯಲಾಗಿತ್ತು. ಆದರೆ, ಇಡೀ ಘಟನೆ ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮುಂದಿನ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಲಿದ್ದಾರೆ ಎಂದು ಪೊಲೀಸರು ಹೇಳಿದರು.
ಹಣಕ್ಕಾಗಿ ಪುಣೆ ಮೂಲದವರಿಂದ ಕೃತ್ಯ: ವರ್ತೂರು ಪ್ರಕಾಶ್ ಹೈನುಗಾರಿಕೆ ವ್ಯವಹಾರ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದ ಪುಣೆ ಮೂಲದ ವ್ಯಕ್ತಿಯೊಬ್ಬರಿಂದ ಸುಮಾರು 19 ಕೋಟಿ ರೂ. ಮೌಲ್ಯದ 2,500 ಹಸುಗಳನ್ನು ಖರೀದಿಸಿದ್ದರು. ಈ ಪೈಕೆಕೆಲ ಹಸುಗಳು ಮೃತಪಟ್ಟಿದ್ದು, ಕೋಟ್ಯಂತರ ರೂ. ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಹಣ ಪಾವತಿಸಿರಲಿಲ್ಲ. ಪುಣೆ ಮೂಲದ ವ್ಯಕ್ತಿ ಪದೇ ಪದೆ ಫೋನ್ ಕರೆ ಮಾಡಿ ಹಣ ಕೊಡುವಂತೆ ಒತ್ತಾಯಿಸುತ್ತಿದ್ದ. ಅದೇ ವಿಚಾರಕ್ಕೆ ಜಗಳವಾಗಿತ್ತು. ಹೀಗಾಗಿ ಪುಣೆ ಮೂಲದ ವ್ಯಕ್ತಿಯೇ ತನ್ನ ಸಹಚರರನ್ನು ಬಿಟ್ಟು ಅಪಹರಿಸಿ, ಹಲ್ಲೆ ನಡೆಸಿದಲ್ಲದೆ, 30 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಪ್ರಕಾಶ್ ಸ್ಪಷ್ಟನೆ ನೀಡುತ್ತಿಲ್ಲ.
ಇದನ್ನೂ ಓದಿ:ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!
ಮಹಿಳೆವಿಚಾರಕ್ಕೆ?:ಮತ್ತೂಂದು ಆಯಾಮದ ತನಿಖೆಯಲ್ಲಿ ವರ್ತೂರು ಪ್ರಕಾಶ್ ಅವರನ್ನು ಮಹಿಳೆಯ ವಿಚಾರಕ್ಕೆ ಆಕೆಯ ಸಂಬಂಧಿಕರೇ ಈ ರೀತಿಯ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಹರಣಕ್ಕೊಳಗಾದ ದಿನ ವರ್ತೂರು ಪ್ರಕಾಶ್ ಪರಿಚಯಸ್ಥ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಅದೇ ವಿಚಾರಕ್ಕೆ ಆಕೆಯ ಪರಿಚಯಸ್ಥರು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮತ್ತೂಂದೆಡೆ ಕಾರಿನ ಹಿಂದಿನ ಸೀಟಿನಲ್ಲಿ ಮಹಿಳೆಯರು ಧರಿಸುವ ವೇಲ್ ಮಾದರಿಯ ಬಟ್ಟೆ ಸಿಕ್ಕಿದೆ. ಜತೆಗೆ ಮುಂದಿನ ಸೀಟಿನಲ್ಲಿ ಖಾರದ ಪುಡಿ ಎರಚಾಡಿರುವುದು ಪತ್ತೆಯಾಗಿದೆ. ಆದರೆ, ಪ್ರಕರಣ ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಿರುವುದರಿಂದ ಕಾರನ್ನು ಜಪ್ತಿ ಮಾಡಿ ಕಾರನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಆಸ್ತಿ ವಿಚಾರಕ್ಕೆ ಕೃತ್ಯ?: ಕೋಲಾರದ ಚಿಂತಾಮಣಿಯಲ್ಲಿ ವರ್ತೂರು ಪ್ರಕಾಶ್ ಅವರಿಗೆ ಸೇರಿದ ಆಸ್ತಿ ಇದ್ದು, ಈ ವಿಚಾರಕ್ಕೆ ಪ್ರಕಾಶ್ ಮತ್ತು ಸ್ಥಳೀಯರೊಬ್ಬರ ನಡುವೆ ಜಗಳ ನಡೆದಿತ್ತು. ಈ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಸಿಸಿಬಿ ಬಲೆಗೆ
ಕಾರಿನ ನಂಬರ್ ಪ್ಲೇಟ್ ಇರಲಿಲ್ಲ: ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಿಂತಿದ್ದ ಕಾರಿನ ನಂಬರ್ ಪ್ಲೇಟೆ ತೆಗೆದುಹಾಕಲಾಗಿತ್ತು. ಜತೆಗೆ ಕಾರಿನ ಒಳಭಾಗದಲ್ಲಿ ಖಾರದ ಪುಡಿ ಎರಚಲಾಗಿತ್ತು. ಮತ್ತೂಂದೆಡೆ ವರ್ತೂರು ಪ್ರಕಾಶ್ ಮತ್ತು ಕಾರು ಚಾಲಕ ಸುನೀಲ್ ಅವರನ್ನು ಅಪಹರಣ ಮಾಡಿದ ಕಿಡಿಗೇಡಿಗಳು ಕೋಲಾರದ ಸುಮಾರು ಐದಾರು ಪ್ರದೇಶಗಳಲ್ಲಿ ಸುತ್ತಾಡಿಸಿ ಕೊನೆಗೆ ಕೋಲಾರದ ಪ್ರಸಿದ್ದ ಬೆಟ್ಟವೊಂದಕ್ಕೆ ಕರೆದೊಯ್ದು ಹಿಂಸೆ ನೀಡಿದ್ದಾರೆ. ಬಳಿಕ ನಯಾಜ್ ಎಂಬವರ ಮೂಲಕ 48 ಲಕ್ಷ ರೂ. ಕೊಡಲಾಗಿದೆ. ಆದರೂ ಆರೋಪಿಗಳು ಹಿಂಸೆ ನೀಡಿ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ವರ್ತೂರು ಪ್ರಕಾಶ್ ಕಾಲಿಗೆ ಮತ್ತು ಕಾರು ಚಾಲಕ ಸುನೀಲ್‌ಗೂ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೃಹ ಸಚಿವರ ಭೇಟಿ ಮಾಡಿದ ವರ್ತೂರು
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪ್ರಕಾಶ್ ಗೃಹ ಸಚಿವ ಬಸರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ ಗೃಹ ಸಚಿವರ ನಿವಾಸಕ್ಕೆ ತೆರಳಿ ಅಪಹರಣ ಪ್ರಕರಣದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರಸ್ತಾಪಿಸಿದ್ದು, ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಹರಣದ ಕುರಿತು ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು
ಬೆಂಗಳೂರು ಬಾಸ್
ಈ ಮಧ್ಯೆ ಕಾರು ಚಾಲಕ ಸುನೀಲ್ ವಿಚಾರಣೆ ಸಂದರ್ಭದಲ್ಲಿ ಕೆಲವೊಂದು ಮಾಹಿತಿ ಸಿಕ್ಕಿದೆ. ಕೋಲಾರದ ಬೆಟ್ಟದಲ್ಲಿರುವ ನೀಲಗಿರಿ ತೋಪಿಗೆ ಕರೆದೊಯ್ದು ಆರೋಪಿಗಳು, ಎರಡು ಕೊಣೆ ಇರುವ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ಎಂಟು ಮಂದಿ ಆರೋಪಿಗಳ ಪೈಕಿ ಒಬ್ಬ ಪದೇ ಪದೆ ಫೋನ್ ಮಾಡಿ ಘಟನೆಯನ್ನು ವಿವರಿಸುತ್ತಿದ್ದ. ಪ್ರತಿ ಮಾತಿನಲ್ಲೂ ಬಾಸ್ ಎಂದು ಸಂಭೋದಿಸುತ್ತಿದ್ದ. ಅಲ್ಲದೆ, ಆ ಕರೆ ಮಾಡಿದ ಇತರೆ ಆರೋಪಿಗಳು ಬೆಂಗಳೂರು ಬಾಸ್ ಕರೆ ಮಾಡಿದ್ದಾರೆ ಎಂದು ಹೇಳುತ್ತಿದ್ದರು ಎಂದು ಸುನೀಲ್ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದೂರು ದಾಖಲಿಸಿದ್ದ ಮಾಜಿ ಶಾಸಕ
ಎಂಟು ಮಂದಿ ಅಪರಿಚಿತ ವ್ಯಕ್ತಿಗಳು ತಮ್ಮನ್ನು ಹಾಗೂ ತಮ್ಮ ಕಾರು ಚಾಲಕ ಸುನೀಲ್‌ನನ್ನು ಅಪಹರಿಸಿ ಹಿಂಸೆ ನೀಡಿದಲ್ಲದೆ, ಮೂವತ್ತು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಮಾಜಿ ಶಾಸಕ ವರ್ತೂರು ಪ್ರಕಾಶ್ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನ.25ರಂದು ಅಪಹರಿಸಿದ ಆರೋಪಿಗಳು ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ ಹಿಂಸೆ ನೀಡಿದ್ದು, ನ.28ರಂದು ಬಿಡುಗಡೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಪ್ರಸ್ತುತ ಪ್ರಕರಣ ಕೋಲಾರದಲ್ಲಿ ನಡೆದಿದ್ದು, ಪ್ರಕರಣವನ್ನು ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.