Advertisement

‘ಆ ಒಂದು ಅಪ್ಪುಗೆ ನನಗೆ ಹಲವು ಪಾಠಗಳನ್ನು ಕಲಿಸಿತು’: ಇಸ್ರೋ ಚೀಫ್ ಕೆ. ಶಿವನ್

09:55 AM Jan 03, 2020 | Hari Prasad |

ನವದೆಹಲಿ: ಕಳೆದ ಸೆಪ್ಟಂಬರ್ ನಲ್ಲಿ ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ಸ್ವಲ್ಪದರಲ್ಲೇ ಎಡವಿದಾಗ ಇಸ್ರೋ ವಿಜ್ಞಾನಿಗಳ ಸಹಿತ ಭಾರತೀಯರೆಲ್ಲರೂ ಒಮ್ಮೆ ನಿರಾಶೆಗೊಳಗಾಗಿದ್ದರು. ಪುಟ್ಟ ರೋವರ್ ಅನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಬೆಂಗಳೂರಿನಲ್ಲಿರುವ ಇಸ್ರೋ ಪ್ರಧಾನ ಕಛೇರಿಗೆ ಆಗಮಿಸಿದ್ದರು.

Advertisement

ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ವೈಫಲ್ಯ ಆ ಕ್ಷಣದಲ್ಲಿ ಇಸ್ರೋ ವಿಜ್ಞಾನಿಗಳ ಮುಖದಲ್ಲಿ ನಿರಾಶೆಯ ಭಾವವನ್ನುಂಟುಮಾಡಿತ್ತು. ಇಸ್ರೋ ಮುಖ್ಯಸ್ಥ ಕೆ. ಶಿವನ್ ಅವರಂತೂ ಅಧೀರರಾಗಿದ್ದರು. ಆದರೆ ಆ ಕ್ಷಣದಲ್ಲಿ ಅವರನ್ನೆಲ್ಲಾ ಸಂತೈಸಿ ಪ್ರಧಾನಿ ಮೋದಿ ಅಲ್ಲಿಂದ ತೆರಳಿದ್ದರು.

ಬಳಿಕ, ಮರು ದಿವಸ ಇಸ್ರೋ ಕೇಂದ್ರ ಕಛೇರಿಯಲ್ಲಿ ನಮ್ಮ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿ ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷರನ್ನು ತಬ್ಬಿಕೊಂಡು ಮೋದಿ ಸಂತೈಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಸಂದರ್ಶನ ಒಂದರಲ್ಲಿ ಅಂದಿನ ಆ ಘಟನೆಯನ್ನು ಇಸ್ರೋ ಮುಖ್ಯಸ್ಥರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

‘ನಾನು ಭಾವುಕನಾಗಿದ್ದ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಿಯವರು ನನ್ನನ್ನು ಅಪ್ಪಿಕೊಂಡರು, ನನ್ನ ಮನಸ್ಸಿನಲ್ಲಿ ನಡೆಯುತ್ತಿದ್ದ ತುಮುಲ ಅವರಿಗೆ ಅರ್ಥವಾದಂತಿತ್ತು. ಆ ಸಂದರ್ಭದಲ್ಲಿ ಮೋದಿ ಅವರು ಅವರಲ್ಲಿದ್ದ ನಾಯಕತ್ವ ಗುಣವನ್ನು ತೋರಿದ್ದರು. ಆ ಒಂದು ಅಪ್ಪುಗೆ ನನಗೆ ಹಲವು ಪಾಠಗಳನ್ನು ಕಲಿಸಿತು. ದೇಶದ ಪ್ರಧಾನಿಯವರೇ ನನ್ನನ್ನು ಸಂತೈಸಿದ್ದು ಒಂದು ದೊಡ್ಡ ವಿಚಾರವೇ ಸರಿ. ನಮಗೆಲ್ಲಾ ಅದು ಒಂದು ದೊಡ್ಡ ನಿರಾಳತೆಯನ್ನು ಒದಗಿಸಿತು’ ಎಂದು ಶಿವನ್ ಅವರು ಅಂದಿನ ಆ ಘಟನೆಯ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದರು.

‘ಪ್ರಧಾನಿಯವರ ಆ ಒಂದು ಅಪ್ಪುಗೆ ನಮಗೆ ಭವಿಷ್ಯದಲ್ಲಿ ಇನ್ನಷ್ಟು ಸಾಧಿಸಲು ಪ್ರೇರಕವಾಗಿದೆ. ಇದೀಗ ನಾವೆಲ್ಲರೂ ಹಿಂದಿಗಿಂತಲೂ ಛಲದಿಂದ, ಉತ್ಸಾಹದಿಂದ ಭವಿಷ್ಯದ ವ್ಯೋಮ ಯೋಜನೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ’ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

Advertisement

ಸೆಪ್ಟಂಬರ್ 08ರ ಬೆಳ್ಳಂಬೆಳಿಗ್ಗೆ ಇಸ್ರೋ ಕಛೇರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಅಲ್ಲಿದ್ದವರನ್ನು ಉದ್ದೇಶಿಸಿ ಸ್ಪೂರ್ತಿಯುತ ಮಾತುಗಳನ್ನಾಡಿದ್ದರು. ವಿಕ್ರಂ ಲ್ಯಾಂಡಿಂಗ್ ವಿಫಲವಾಗಿರಬಹುದು ಆದರೆ ಚಂದ್ರಯಾನ-2ರಲ್ಲಿ ನಮ್ಮ ವಿಜ್ಞಾನಿಗಳು ತೋರಿದ ಸಾಧನೆಯನ್ನು ಭಾರತ ಮಾತ್ರವಲ್ಲ ವಿಶ್ವವೇ ಮೆಚ್ಚಿಕೊಂಡಿದೆ. ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೆ ನಮ್ಮ ಸರಕಾರದ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು.

ಬಳಿಕ ಅಲ್ಲಿಂದ ತೆರಳುವ ಸಂದರ್ಭದಲ್ಲಿ ತನ್ನನ್ನು ಬೀಳ್ಕೊಡಲು ಬಾಗಿಲಿನವರೆಗೆ ಬಂದ ಇಸ್ರೋ ಅಧ್ಯಕ್ಷರನ್ನು ಪ್ರಧಾನಿಯವರು ಬರಸೆಳೆದು ತಬ್ಬಿಕೊಂಡು ಅವರ ಬೆನ್ನು ತಟ್ಟಿದ್ದರು. ಈ ಸಂದರ್ಭದಲ್ಲಿ ಶಿವನ್ ಭಾವನೆಯ ಕಟ್ಟೆಯೊಡೆದು ಅಳುವ ದೃಶ್ಯ ಆ ದಿನ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಚರ್ಚಾ ವಿಷಯವಾಗಿತ್ತು. ಮತ್ತು ಪ್ರಧಾನಿ ಮೋದಿ ಅವರ ಈ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next