Advertisement

ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣ: ಶಾಸಕ ಮುನಿರತ್ನಗೆ ರಿಲೀಫ್

12:32 PM Jan 21, 2021 | Team Udayavani |

ಬೆಂಗಳೂರು: 2018ರ ವಿಧಾನಸಭೆ ಚುನಾವಣೆ ವೇಳೆ ಆರ್.ಆರ್. ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿದೆ. ಇದರಿಂದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಆರ್.ಆರ್. ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ “ರಿಲೀಫ್’ ಸಿಕ್ಕಂತಾಗಿದೆ.

Advertisement

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಎನ್‌. ಆನಂದ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ವಾದ-ಪ್ರತಿವಾದ ಆಲಿಸಿದ ಬಳಿಕ, ಅರ್ಜಿದಾರರು ತಾವು ರಾಜಕೀಯ ಪಕ್ಷವೊಂದರ ಹಿತೈಷಿಗಳು ಎಂದು ಹೇಳಿಕೊಂಡಿದ್ದಾರೆ. ಅರ್ಜಿದಾರರು ಮತ್ತು ಪ್ರತಿವಾದಿ ಶಾಸಕರ ನಡುವೆ ರಾಜಕೀಯ ವೈಷಮ್ಯವಿದೆ. ಮುಖ್ಯವಾಗಿ, ಪೊಲೀಸರ ತನಿಖೆ ಪ್ರಗತಿಯಲ್ಲಿದೆ. ಜೊತೆಗೆ ಪ್ರಕರಣದ ತನಿಖೆಗೆ ಸಿಬಿಐ ಅಸಮ್ಮತಿ ಸೂಚಿಸಿದೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರ ಮನವಿಯನ್ನು ಪರಿಗಣಿಸುವ ಅಂಶಗಳು ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ಇತ್ಯರ್ಥಪಡಿಸಿತು.

ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ ಸುಪ್ರೀಂ

ಪ್ರಕರಣದ ತನಿಖೆಯನ್ನು ಜಾಲಹಳ್ಳಿ ಪೊಲೀಸರು ಸಮರ್ಪಕವಾಗಿ ನಡೆಸಿಲ್ಲ ಎಂದು ಅರ್ಜಿದಾರರು ಈ ಹಿಂದೆ ಆಕ್ಷೇಪಿಸಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್‌, ಜಾಲಹಳ್ಳಿ ಠಾಣಾ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ಹಿರಿಯ ಐಪಿಎಸ್‌ ಅಧಿಕಾರಿಯನ್ನು ನೇಮಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ 2020ರ ನ.11ರಂದು ಹೈಕೋರ್ಟ್‌ ನಿರ್ದೇಶಿಸಿತ್ತು.

Advertisement

ಅದರಂತೆ ನಗರದ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಎಸ್‌. ಮುರುಗನ್‌ ಅವರಿಂದ ಪೊಲೀಸರ ತನಿಖೆಯನ್ನು ಪರಾಮರ್ಶಿಸಿ ನೀಡಿದ 51 ಪುಟಗಳ ವರದಿ ಹಾಗೂ ಪೂರಕ ದಾಖಲೆಗಳನ್ನು ಸರ್ಕಾರವು ಬುಧವಾರ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.

ಇದನ್ನೂ ಓದಿ:ಅನುಭವಿಲ್ಲದ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದೆ..ನೋಡೋಣ: ಮಾಧುಸ್ವಾಮಿ

ಪ್ರಕರಣ ಕುರಿತು ಜಾಲಹಳ್ಳಿ ಠಾಣೆ ಪೊಲೀಸರು ನಡೆಸಿರುವ ತನಿಖೆಯಲ್ಲಿ ಕೆಲ ಲೋಪಗಳಿವೆ. ಪ್ರಕರಣದಲ್ಲಿ ದಾಖಲಾಗಿರುವ ಎರಡೂ ಎಫ್ಐಆರ್‌ಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಆದರೆ, ಶಾಸಕ ಮುನಿರತ್ನ ವಿರುದ್ಧ ಆರೋಪ ಮಾಡುತ್ತಿರುವ ಅರ್ಜಿದಾರರು ತನಿಖೆಗೆ ಸೂಕ್ತ ಸಹಕಾರ ನೀಡುತ್ತಿಲ್ಲ. ಅರ್ಜಿದಾರರು ಹಾಗೂ ಮುನಿರತ್ನ ನಡುವೆ ವೈಮನಸ್ಯವಿದೆ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ವರದಿ ಪಶೀಲಿಸಿದ ನ್ಯಾಯಪೀಠ, ಪ್ರಕರಣ ಕುರಿತು ದಾಖಲಾದ ಎರಡು ಎಫ್ಐಆರ್‌ಗಳ ತನಿಖೆ ಪ್ರಗತಿಯಲ್ಲಿದೆ. ಮತ್ತೂಂದೆಡೆ ಸಿಬಿಐ ಸಹ ತನಿಖೆ ನಡೆಸಲು ಅಸಹಾಯಕತೆ ವ್ಯಕ್ತಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ. ಆದರೆ, ಪೊಲೀಸರು ತನಿಖೆಯನ್ನು ಮುಂದುವರಿಸಬಹುದು. ತನಿಖೆ ವೇಳೆ ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಬೇಕು. ಅರ್ಜಿದಾರರು ಪೊಲೀಸರ ತನಿಖೆಗೆ ಸಹರಿಸಬೇಕೆಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು

Advertisement

Udayavani is now on Telegram. Click here to join our channel and stay updated with the latest news.

Next