Advertisement

ಕೇಂದ್ರದಿಂದ ಕೇಂದ್ರದೆಡೆಗೆ ಪುಟ್ಟಹೆಜ್ಜೆಗಳ ದೊಡ್ಡ ಪಯಣ

08:46 PM Dec 12, 2019 | Team Udayavani |

2015ರ ಡಿಸೆಂಬರ್‌ ತಿಂಗಳಲ್ಲಿ, ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾ (NSD) ಯ ವಿದ್ಯಾರ್ಥಿಗಳ ತಂಡವೊಂದು ಬನ್ನಂಜೆ ಸಂಜೀವ ಸುವರ್ಣ ಅವರ ಬಳಿ ತರಬೇತಿಗಾಗಿ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರಕ್ಕೆ ಆಗಮಿಸಿತ್ತು. ಸುಮಾರು ಒಂದು ತಿಂಗಳ ಅವಧಿಯ
ತರಬೇತಿಯ ಬಳಿಕ ಆ ತಂಡದಿಂದ ಹಿಂದಿ ಭಾಷೆಯಲ್ಲಿ “ಚಕ್ರವ್ಯೂಹ’ ಎಂಬ ಯಕ್ಷಗಾನವು ಪರಿಣಾಮಕಾರಿಯಾಗಿ ಪ್ರಸ್ತುತಗೊಂಡಿತ್ತು. ಎನ್‌ ಎಸ್‌ಡಿ ಮತ್ತು ಯಕ್ಷಗಾನ ಕೇಂದ್ರದ ಸಹೃದಯ ಸಂಬಂಧ ನಿರಂತರವಾಗಿರುವ ಸೂಚನೆಯಾಗಿ ಇತ್ತೀಚೆಗೆ ಯಕ್ಷಗಾನ ಕೇಂದ್ರದ ಮಕ್ಕಳ ತಂಡವು ಎನ್‌ಎಸ್‌ಡಿಯಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಪ್ರಶಂಸೆಗೆ ಒಳಗಾಯಿತು.

Advertisement

ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಮಕ್ಕಳ ತಂಡವೊಂದು ಬಾಲಸಂಗಮದ ಪ್ರದರ್ಶನಕ್ಕೆ ಆಹ್ವಾನಿತವಾಗಿತ್ತು. ಚಕ್ರವ್ಯೂಹ ಪ್ರಸಂಗವನ್ನು ಆಯ್ದು ಸುಮಾರು ಎರಡು ತಿಂಗಳ ರಂಗತಾಲೀಮು ನಡೆಸಿದ ಬಳಿಕ ಹಿಮ್ಮೇಳ ಕಲಾವಿದರೂ ಸೇರಿದಂತೆ 23 ಜನರ ತಂಡವು ಎನ್‌ ಎಸ್‌ಡಿಗೆ ತೆರಳಿತು. ಎನ್‌ಎಸ್‌ಡಿಯ “ಅಭಿಮಂಚ್‌’ ವೇದಿಕೆಯಲ್ಲಿ ಜರಗಿದ ಅಂದಿನ ಪ್ರದರ್ಶನದಲ್ಲಿ ಬಾಲಕಲಾವಿದರೇ ಭಾಗವತ ಮತ್ತು ಮದ್ದಲೆ ವಾದಕರಾಗಿ ಭಾಗವಹಿಸಿದ್ದುದು ವಿಶೇಷವಾಗಿತ್ತು. ಪೂರ್ವಾರ್ಧದ ಭಾಗವತಿಕೆಯನ್ನು ಕಾರ್ತಿಕ್‌ ಭಟ್‌ ಮತ್ತು ಉತ್ತರಾರ್ಧದ ಭಾಗವತಿಕೆಯನ್ನು ರಾಹುಲ್‌ ನಡೆಸಿಕೊಟ್ಟರು.

ಮದ್ದಳೆ ವಾದಕನಾಗಿ ಶಮಂತ್‌ ಪುಟ್ಟ ಬೆರಳುಗಳ ಕೌಶಲವನ್ನು ತೋರಿದರು. ಹರ್ಷ, ವರುಣ್‌,
ಸಂಕೇತ ಪೂರ್ವರಂಗದಲ್ಲಿ ಕೋಡಂಗಿಗಳಾಗಿ ಕಾಣಿಸಿಕೊಂಡರು. ಪುಟ್ಟ ಹುಡುಗ ಅನಿರುದ್ಧ
ಬಾಲಗೋಪಾಲನಾಗಿ ಅಭಿನಯಿಸಿ ಮುಂದೆ ಉತ್ತರ ರಂಗದಲ್ಲಿ ಅಭಿಮನ್ಯುವಿನ ಸಾರಥಿಯಾಗಿ
ರಂಗ ಪ್ರವೇಶಿಸಿದರು. ಸ್ಕಂಧನ ಕೌರವ, ಸುಧನ್ವನ ದ್ರೋಣ, ಶ್ರೀರಾಮ್‌ನ ಕರ್ಣ, ಅಭಯ್‌ನ ಶಲ್ಯ, ಜ್ಞಾನೇಶ್‌ನ ಅರ್ಜುನ, ಶ್ರೀಚರಣ್‌ನ ಕೃಷ್ಣ , ಅಪ್ರಮೇಯನ ಅಭಿಮನ್ಯು, ಶ್ರವಣ್‌ ಬಾಸ್ರಿಯ ಸುಭದ್ರೆ, ತುಷಾರ್‌ನ ಸಂಶಪ್ತಕ ಅಚ್ಚುಕಟ್ಟಾಗಿ ಮೂಡಿಬಂದವು. ಚೆಂಡೆವಾದಕರಾಗಿ ಕೃಷ್ಣಮೂರ್ತಿ ಭಟ್‌ ಅವರ ಸಹಕಾರವೂ ಗಮನಾರ್ಹ. 90 ನಿಮಿಷದ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆ ಎಲ್ಲರೂ ಕರತಾಡನ ಮಾಡುತ್ತ ನಿಂತುಕೊಂಡು ಅಭಿನಂದಿಸಿದರು.

ಆ ಬಳಿಕ ಸಭಾಸದರು ಹಾಗೂ ಅಲ್ಲಿನ ರಂಗತರಬೇತಿಯ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಅವಕಾಶವಿತ್ತು. ಸಹೃದಯರ ಪ್ರಶ್ನೆಗಳಿಗೆ ಕೇಂದ್ರದ ವಿದ್ಯಾರ್ಥಿ ಸುಧನ್ವ ಉತ್ತರಿಸುತ್ತ ಯಕ್ಷಗಾನ ಕೇಂದ್ರದ ತರಬೇತಿ, ಹೆಜ್ಜೆಗಾರಿಕೆ-ನಾಟ್ಯಾಭಿನಯಗಳ ಕಲಿಕೆ, ರಂಗತಾಲೀಮಿನ ವಿಧಾನದ ಬಗ್ಗೆ ವಿವರಿಸಿದರು. ಯಕ್ಷಗಾನದ ಮುದ್ರೆಗಳು ಭರತನಾಟ್ಯದ ಮುದ್ರೆಗಳಿಂದ ಪ್ರಭಾವಕ್ಕೊಳಗಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್‌ ತೀರ್ಥಹಳ್ಳಿ ಸ್ವತಃ ಅಭಿನಯಿಸಿ ಎರಡು ಕಲೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಗೊಳಿಸಿದರು. ಸಂಸ್ಕೃತ ನಾಟಕಕ್ಕೂ ಯಕ್ಷಗಾನ ರಂಗಭೂಮಿಗೂ ಇರುವ ಸಾಮ್ಯ-ವ್ಯತ್ಯಾಸಗಳ ಬಗ್ಗೆ ಕಿರು ಸಂವಾದ ನಡೆಯಿತು.

ಇದು ಕೇಂದ್ರದಿಂದ ಕೇಂದ್ರದವರೆಗಿನ ಕಲಾಯಾತ್ರೆ !
ಕರ್ನಾಟಕದ ಉಡುಪಿಯಲ್ಲಿರುವ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು, ದೇಶದ ಕೇಂದ್ರವಾಗಿರುವ ರಾಜಧಾನಿಗೆ ತೆರಳಿ ಅಲ್ಲಿನ ನಾಟಕ ಕೇಂದ್ರದಲ್ಲಿ ಯಶಸ್ವಿ ಪ್ರದರ್ಶನ ನೀಡುವ ಮೂಲಕ ಕಲಾಯಾತ್ರೆಯನ್ನು ಅರ್ಥಪೂರ್ಣಗೊಳಿಸಿದರು.

Advertisement

ಡಾ| ಶೈಲಜಾ ಭಟ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next