Advertisement

ಹೂವು ಆಕಾಶವೆಲ್ಲ ನಂದೆಂದಿತು!

11:39 AM Apr 05, 2018 | |

ನಾವು ನಮ್ಮ ಸುತ್ತಮುತ್ತ, ಹೂದೋಟದಲ್ಲಿ ಅಥವಾ ಕಾಡಿನಲ್ಲಿ ಹೂವುಗಳನ್ನು ನೋಡಿಯೇ ಇರುತ್ತೇವೆ. ಅವು ಮುಷ್ಠಿ ಗಾತ್ರದಷ್ಟು ಮಾತ್ರ ಇದ್ದಿರುತ್ತವೆ. ಕೆಲವೇ ಕೆಲವು ಅಪರೂಪದ ಹೂವುಗಳು ಮಾತ್ರ ಅದಕ್ಕಿಂತ ದೊಡ್ಡದಾಗಿ ಬೆಳೆಯುತ್ತವೆ. ಇಲ್ಲಿಯ ತನಕ ಅತಿ ದೊಡ್ಡ ಹೂವುಗಳು ಸುಮಾತ್ರಾ ಮತ್ತು ಇಂಡೋನೇಷ್ಯಾದಲ್ಲಿ ಮಾತ್ರ ಬೆಳೆಯುತ್ತದೆ ಎಂದು ಮಕ್ಕಳಿಗೆ ವರ್ಣಿಸುತ್ತಿದ್ದೆವು. ಆದರೆ ಈಗ ನಾವು ದೈತ್ಯ ಹೂವನ್ನು ನೋಡಿಬರಲು ವಿದೇಶಗಳಿಗೆ ಹೋಗಬೇಕಾಗಿಲ್ಲ. ನಮ್ಮ ನೆರೆಯ ಕೇರಳ ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಅದನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲ, ಅದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಗಾತ್ರದ ಹೂವು ಎಂಬ ಖ್ಯಾತಿಗೆ ಪಾತ್ರವಾಗಿದೆ.

Advertisement

ನಮ್ಮಲ್ಲಿಗೆ ಬಂದ ಕತೆ
ಈ ಹೂವಿನ ವೈಜ್ಞಾನಿಕ ಹೆಸರು ಅಮೋರ್‌ಫೋಫ‌ಲ್ಲಸ್‌ ಟಿಟಾನಮ್‌. ಟೈಟಾನ್‌ ಅರಮ್‌ ಎಂಬ ಹೆಸರೂ ಇದೆ. ಕೇರಳದ ಅಲೆಪ್ಪಿ ಜಿಲ್ಲೆಯ ಉತ್ತರ ವಯನಾಡಿನ ಗುರುಕುಲ ಬೊಟಾನಿಕಲ್‌ ಅಭಯಾರಣ್ಯದಲ್ಲಿ ಈ ಹೂವಿರುವುದು. ಇದರ ಹಿಂದೊಂದು ಅಚ್ಚರಿಯ ಕತೆಯಿದೆ. ಒಂಭತ್ತು ವರ್ಷಗಳ ಹಿಂದೆ ವಿದೇಶದಿಂದ ತಂದ ಅದರ ಬೀಜವನ್ನು ಬಿತ್ತಿ ನೀರೆರೆದು ಗೊಬ್ಬರ ಹಾಕಿ ಬೆಳೆಸಲಾಗಿತ್ತು. ಸುದೀರ್ಘ‌ ಸಮಯದ ಬಳಿಕ ಅದು ಈಗ ಮೊದಲ ಬಾರಿ ಹೂವನ್ನು ಅರಳಿಸಿ ನಿಂತಿದೆ. ಇಂಡೋನೇಷ್ಯಾದಲ್ಲಿ ಇದನ್ನು “ಬುಂಗಾ’ ಎಂದು ಕರೆಯುತ್ತಾರೆ. ಅದರರ್ಥ ಮೃತ ದೇಹದ ಹೂವು ಎಂದು. 

ಆಕರ್ಷಕವಲ್ಲದ ಸಂಗತಿ
ಈ ಹೂವು ದೈತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುವ ಈ ಹೂವಿನಲ್ಲಿ ಒಂದು ಆಕರ್ಷಕವಲ್ಲದ ಸಂಗತಿ ಇದೆ ಎಂದರೆ ನಂಬುತ್ತೀರಾ? ಅದುವೇ ಅದರ ವಾಸನೆ. ಸಾಮಾನ್ಯವಾಗಿ ಹೂವು ಎಂದರೆ ಮೊದಲು ನೆನಪಾಗುವುದು ಅದರ ಸುಗಂಧ. ಆದರೆ ಈ ದೈತ್ಯ ಹೂವು ಸೂಗಂಧ ಬೀರುವುದಿಲ್ಲ. ಬದಲಾಗಿ ದುರ್ಗಂಧವನ್ನು ಬೀರುತ್ತದೆ. ಬಣ್ಣ ಕಂಡು ಮರುಳಾಗಿ ಮೂಸಲು ಹೋದರೆ ದುರ್ಗಂಧ ಬೀರುವ ಅದು ಜೀರುಂಡೆಯಂತಹ ಕೀಟಗಳು ಮತ್ತು ಜೇನುನೊಣಗಳನ್ನು ಬಹಳ ಆಕರ್ಷಿಸುತ್ತದೆ.

ಎತ್ತೆತ್ತರ ಬಾನೆತ್ತರ
ಈ ಹೂವು ನೆಲದಿಂದ ಅಳೆದರೆ ಹತ್ತು ಅಡಿ ಎತ್ತರವಾಗುತ್ತದೆ. ಅದರ ಸುತ್ತಳತೆ ಮೂರು ಮೀಟರ್‌ಗಿಂತ ಹೆಚ್ಚಿದೆ. ಹೂವಿಗಿಂತ ಮೇಲೆ ಐದು ಅಡಿ ಎತ್ತರ ಅದರ ಪರಾಗದ ದಂಡು ಇರುತ್ತದೆ. ಎಲೆಗಳು ಹದಿನಾರು ಅಡಿ ಅಗಲ, ಇಪ್ಪತ್ತು ಅಡಿ ಉದ್ದವಿರುತ್ತದೆ. ಗಿಡ ಹೂ ಬಿಟ್ಟ ಮೇಲೆ ಎರಡರಿಂದ ಮೂರು ವರ್ಷ ಬದುಕಿ ಹೂ ಕೊಡುತ್ತದೆ. ಅರಳಿದ ಹೂ ಎರಡು ದಿನಗಳ ಬಳಿಕ ಕೊಳೆತು ಹೋಗುತ್ತದೆ. ಐವತ್ತು ಕಿಲೋಗಿಂತ ಅಧಿಕ ಭಾರವಿರುವ ಸುವರ್ಣ ಗೆಡ್ಡೆಯಂತಹ ಬೀಜದಿಂದ ಇದರ ವಂಶಾಭಿವೃದ್ಧಿ ಮಾಡುತ್ತಾರೆ. ಹೂವು ಕೊನೆಗೆ ಮುಸುಕಿನ ಜೋಳದಂತಿರುವ ಹಣ್ಣಾಗಿ ಬದುಕು ಮುಗಿಸುತ್ತದೆ. 

Advertisement

 ಪ. ರಾಮಕೃಷ್ಣ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next