Advertisement
ಕೆಪಿಸಿಸಿ ಪದಾಧಿಕಾರಿಗಳಾಗಿರುವ ಶಾಸಕರು ಹಾಗೂ ಸಚಿವರಿಗೆ ಎರಡೆರಡು ಜವಾಬ್ದಾರಿ ಬೇಡ, ಪಕ್ಷದ ಕೆಲಸಗಳಿಗೆ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹೊಸ ತಂಡ ಕಟ್ಟಬೇಕೆಂಬ ಹೈಕಮಾಂಡ್ ತೀರ್ಮಾನದ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷರ ಸಹಿತ ಪದಾಧಿಕಾರಿಗಳಾಗಿರುವ ಶಾಸಕರು, ಸಚಿವರು ಸದ್ಯದಲ್ಲೇ ಪಕ್ಷದ ಹುದ್ದೆಗಳಿಂದ ಬಿಡುಗಡೆಯಾಗಲಿದ್ದಾರೆ. ಹಾಲಿ ಇರುವ ಪದಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಸಹಿತ ಹೈಕಮಾಂಡ್ ಅಷ್ಟೊಂದು ಉತ್ತಮ ಅಭಿಪ್ರಾಯ ಹೊಂದಿಲ್ಲದ ಕಾರಣ ಕೆಪಿಸಿಸಿ ಪದಾಧಿಕಾರಿಗಳ ಮಟ್ಟದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಸಹಿತ ಐವರು ಕಾರ್ಯಾಧ್ಯಕ್ಷರಿದ್ದು, ಅವರಲ್ಲಿ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಸಚಿವರಾಗಿದ್ದಾರೆ. ಸಲೀಂ ಅಹ್ಮದ್ ಮೇಲ್ಮನೆಯಲ್ಲಿ ಸಚೇತಕರಾಗಿದ್ದಾರೆ. ಹೀಗಾಗಿ ಚಂದ್ರಪ್ಪ ಅವರನ್ನು ಉಳಿಸಿಕೊಂಡು ಈ ನಾಲ್ವರನ್ನು ಪಕ್ಷದ ಹುದ್ದೆಯಿಂದ ಬಿಡುಗಡೆಗೊಳಿಸಿ ಹೊಸ ಕಾರ್ಯಾಧ್ಯಕ್ಷರು ನೇಮಕವಾಗಲಿದ್ದಾರೆ. ಅದೇ ರೀತಿ ಚುನಾವಣೆಗೆ ಮುನ್ನ ಪಕ್ಷದ ವಿವಿಧ ಪದಾಧಿಕಾರಿಗಳಾಗಿ ನೇಮಕಗೊಂಡವರ ಪೈಕಿ ಬಹುತೇಕರು ಶಾಸಕರು ಹಾಗೂ ಸಚಿವರಾಗಿದ್ದಾರೆ. ಅವರೆಲ್ಲರನ್ನು ಪಕ್ಷದ ಹುದ್ದೆಗಳಿಂದ ಬಿಡುಗಡೆಗೊಳಿಸಿ ಹೊಸಬರ ನೇಮಕಕ್ಕೆ ಪಟ್ಟಿ ಸಿದ್ಧವಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Related Articles
ಅಂದಾಜು 15ರಿಂದ 20 ಜಿಲ್ಲಾಧ್ಯಕ್ಷರ ಬದಲಾವಣೆ ಆಗುವ ಸಾಧ್ಯತೆಗಳಿವೆ. ಈ ಪೈಕಿ ಕೆಲವರು ಶಾಸಕರಾಗಿದ್ದಾರೆ. ಚುನಾವಣೆ ವೇಳೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪವೂ ಇದೆ. ಪ್ರಮುಖವಾಗಿ ಸದಸ್ಯತ್ವ ನೋಂದಣಿ, ಪಕ್ಷ ಸಂಘಟನೆ, ಕಾರ್ಯಕರ್ತರ ಜತೆ ಹೊಂದಾಣಿಕೆ ನಿರೀಕ್ಷಿತ ಮಟ್ಟಕ್ಕೆ ಇಲ್ಲ ಎಂದು ಹೇಳಲಾಗುತ್ತಿದ್ದು, ಅಂತಹ ಜಿಲ್ಲಾಧ್ಯಕ್ಷರು ಸ್ಥಾನ ಕಳೆದುಕೊಳ್ಳಲಿದ್ದಾರೆ.
Advertisement
ಆ. 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಹಾಗೂ ಪ್ರಿಯಾಂಕಾ ವಾದ್ರಾ ಆಗಮಿಸಲಿದ್ದಾರೆ. ಈ ಬೃಹತ್ ಕಾರ್ಯಕ್ರಮವನ್ನು ಅದ್ದೂರಿ ಹಾಗೂ ಯಶಸ್ವಿಗೊಳಿಸಲು ಪಕ್ಷ ಹಾಗೂ ಸರಕಾರ ಜಂಟಿಯಾಗಿ ಕೆಲಸ ಮಾಡುತ್ತಿವೆ. ಈ ಸಮಾರಂಭದ ಬಳಿಕ ಆಯ್ದ ಹಿರಿಯರೊಂದಿಗೆ ಮತ್ತೂಂದು ಸುತ್ತಿನ ಸಮಾಲೋಚನೆ ನಡೆಸಿ ಅಂದಾಜು 186 ಹೊಸ ಪದಾಧಿಕಾರಿಗಳ ನೇಮಕಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಮಾತ್ರವಲ್ಲ, ಡಿಸೆಂಬರ್‌ನಲ್ಲಿ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ಆದಷ್ಟು ಬೇಗ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ಪಡೆದು ಪಕ್ಷ ಸಂಘಟನೆಗೆ ಹೊಸ ತಂಡವನ್ನು ನಿಯೋಜಿಸಬೇಕೆಂಬುದು ಪಕ್ಷದ ಲೆಕ್ಕಾಚಾರವಾಗಿದೆ.