Advertisement

ಬಿಗ್‌ ಬ್ರದರ್‌ ಮತ್ತು ಬಿಗ್‌ ಬಾಸ್‌

03:45 AM Feb 10, 2017 | Team Udayavani |

ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ಬಾಸ್‌ ವೀಕ್ಷಕರು ಮೆಚ್ಚಿಕೊಂಡು ಬಂದಿರುವಂತದ್ದು. ವೀಕ್ಷಕರಿಂದಲೇ ಒಂದು ಮಟ್ಟಿಗೆ ಬೆಳೆದು ನಿಂತಿರುವ ಬಿಗ್‌ಬಾಸ್‌ ತನ್ನದೇ ಆದ ಹೊಳಪನ್ನು ಉಳಿಸಿಕೊಂಡಿದೆ. ಮನೆಯೊಳಗಿರುವ ಎಲ್ಲಾ ಸದಸ್ಯರು ಬಿಗ್‌ಬಾಸ್‌ ನ ಆಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ. 

Advertisement

ಮನೆಯೊಳಗಿರುವ ಕ್ಯಾಮರಾಗಳು, ಪಾಲಿಸಲೇಬೇಕಾದ ನೀತಿ-ನಿಯಮಗಳು ಮತ್ತು ಶಿಕ್ಷೆಗಳಿಗೆ ತನ್ನದೇ ಆದ ಅರ್ಥಗಳಿವೆ. ಸದಸ್ಯರುಗಳು ನಿಯಮಗಳನ್ನು ಮುರಿದು ಬಿಗ್‌ಬಾಸ್‌ನ ಘೋಷಣೆಗಳಿಗೆ ತದ್ವಿರುದ್ದವಾಗಿ ನಡೆದುಕೊಂಡಿದ್ದೇ ಎಂದಾದಲ್ಲಿ ಬಿಗ್‌ಬಾಸ್‌ ಕೈಗೊಳ್ಳುವ ನಿರ್ಧಾರಕ್ಕೆ ಸದಸ್ಯರುಗಳು ಕಟಿಬದ್ಧರಾಗಿರಬೇಕಾಗುತ್ತದೆ ಎಂಬ ಇತ್ಯಾದಿ ಸಂಗತಿಗಳು ನಮ್ಮಗೆಲ್ಲ ತಿಳಿದಿರುವಂತದ್ದು.

ಬಿಗ್‌ಬಾಸ್‌ನ ಶೈಲಿ, ಮನೆಯೊಳಗಿರುವ ವಾತಾವರಣ ಹಾಗೂ ಸದಸ್ಯರುಗಳ ವಿಧೇಯತೆಯೋ ಅಥವ ಕೆಲವೊಮ್ಮೆ ಇಲ್ಲ ಅನ್ನುವುದಕ್ಕೆ ತದ್ವಿರುದ್ಧವಾದ ಅಣಕದ ನಾಟಕ ನೋಡಿದಾಗ ಪ್ರಶ್ನೆಗಳು ಎದುರಾಗುತ್ತದೆ. ವೀಕ್ಷಕರು ಒಟ್ಟು ಕಾರ್ಯಕ್ರಮದ ಕುರಿತು ಮೆಚ್ಚಿಕೊಳ್ಳುತ್ತಾರೆ. ಆದರೆ ಜಾರ್ಜ್‌ ಆರೆÌಲ್‌ನ 1984 ಕಾದಂಬರಿಯನ್ನು ಓದಿದಾಗ ನಾವು ಎಲ್ಲ ಸಂಗತಿಗಳನ್ನು ಮತ್ತೆ ನೆನಪಿಸಿಕೊಳ್ಳುತ್ತೇವೆ. 1984 ಒಂದು ವ್ಯವಸ್ಥೆಯ ಕುರಿತು ಅಣಕವಾಡುವ ಕಾದಂಬರಿ ಅಷ್ಟೇ. ಇಲ್ಲಿರುವ ಬಹಳಷ್ಟು ಸಂಗತಿಗಳು ವಾಸ್ತವ ಜಗತ್ತಿನ ರೀತಿ ನೀತಿಗಳು ಮತ್ತು ಬದುಕಿನ ಶೈಲಿಯನ್ನು ವಿಮಶಾìತ್ಮಕವಾಗಿ ಓದುಗರ ಮುಂದಿಡುವ ಪ್ರಯತ್ನವನ್ನು ಭಾರತದಲ್ಲಿ ಹುಟ್ಟಿದ್ದ ಆಂಗ್ಲ ಲೇಖಕ, ಕಾದಂಬರಿಕಾರ, ಪರ್ತಕರ್ತ ಜಾರ್ಜ್‌ ಆರೆÌಲ್‌ ನೀಡಿದ್ದಾರೆ.

ವಸಹಾತುಶಾಹಿ ಸಾಮ್ರಾಜ್ಯದ ಪರಿಕಲ್ಪನೆಗಳಿದ್ದ ಆ ಸಮಯದಲ್ಲಿ, ಭಾರತದಲ್ಲಿದ್ದ ಆಂಗ್ಲ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರ ಮಗ ಜಾರ್ಜ್‌ ಆರೆÌಲ್‌. 1948ರಲ್ಲಿ ಇದ್ದುಕೊಂಡು ಬರೆದ 1984 ಕಾದಂಬರಿಯು ಒಂದು ಕಾಲ್ಪನಿಕ ಜಗತ್ತಿನ ಪರಿಕಲ್ಪನೆಗೆ ಅಕ್ಷರ ರೂಪ ನೀಡಿರುವಂತದ್ದು. 1948 ರಲ್ಲಿದ್ದ ಕಾಲ ಅದೇ ರೀತಿ ಸಾಗಿದ್ದೇ ಆದಲ್ಲಿ ಸುಮಾರು 1984ರ ಹೊತ್ತಿನಲ್ಲಿ ಈ ವಿಶ್ವ ಹೇಗಿರಬಹುದು? ಎಂಬ ತನ್ನಲ್ಲೇ ಮೂಡಿದ ಪ್ರಶ್ನಾರ್ಥಕ ಚಿಹ್ನೆಗೆ ಲೇಖಕ ತನ್ನದೇ ಅನುಭವ ಶೈಲಿಯಲ್ಲಿ ಉತ್ತರವನ್ನು ನೀಡುತ್ತಾನೆ. ಆ ಸಮಯದಲ್ಲಿ ಈ ಕಾದಂಬರಿ ಬಹುಪಾಲು ಜನರ ಕಣ್ಣು ಕೆಂಪಾಗಿಸಿದ್ದು ಸುಳ್ಳಲ್ಲ.

ಬಿಗ್‌ಬಾಸ್‌ನ ಶೈಲಿ ಮತ್ತು ಅದರ ಒಟ್ಟು ಕಾರ್ಯಕ್ರಮ ಜಾರ್ಜ್‌ ಆರೆÌಲ್‌ನ 1984 ಕಾದಂಬರಿಯ ಪ್ರತಿಯೊಂದು ಪುಟದ ಸಾರವನ್ನು ಹೇಳುತ್ತದೆ. ಕಾದಂಬರಿಯನ್ನು ಒಮ್ಮೆ ಓದಿದ ಮೇಲೆ ಬಿಗ್‌ಬಾಸ್‌ನ ವಿವಿಧ ಎಪಿಸೋಡ್‌ಗಳನ್ನು ನೋಡಿದರೂ ಬಹಳಷ್ಟು ಸಂಗತಿಗಳು ತುಲನಾತ್ಮಕವಾಗಿ ನಾವು ಒಂದಕ್ಕೊಂದನ್ನು ಸುಲಭವಾಗಿ ಜೋಡಿಸುತ್ತಾ ಹೋಗಬಹುದು. ಕಾದಂಬರಿಯಲ್ಲಿರುವ ಬಿಗ್‌ ಬ್ರದರ್‌ ಆ ನಾಡಿನಲ್ಲಿರುವ ಅತೀ ಹೆಚ್ಚು ಪ್ರಭಾವಿ ಮತ್ತು ಬಲಶಾಲಿ ದೊರೆಯಾಗಿದ್ದಾನೆ. 

Advertisement

ಪ್ರಜೆಗಳು ಆತ ಹೇಳಿದ ಹಾಗೆ ನಡೆದುಕೊಳ್ಳ ತಕ್ಕದ್ದು. ಒಂದು ವೇಳೆ ಬಿಗ್‌ ಬ್ರದರ್‌ನ ವಿರುದ್ಧವಾಗಿ ಹೋದರೆ ಶಾಶ್ವತವಾಗಿ ಈ ಜಗತ್ತಿನಿಂದ ಎಲಿಮಿನೇಟ್‌ ಆಗಿ ಬಿಡುತ್ತಾರೆ. ಬಿಗ್‌ ಬ್ರದರ್‌ಗೆ ತನ್ನ ಪ್ರಜೆಗಳ ಮೇಲೆ ನಂಬಿಕೆ ಇರುವುದಿಲ್ಲ , ಎಲ್ಲಿಯಾದರೂ ತನ್ನ ವಿರುದ್ಧ ಮಾತನಾಡಿದರೆ ಎನ್ನುವ ಬಿಗಿ ಅನುಮಾನ ಮತ್ತೆ ಮತ್ತೆ ಕಾಡುತ್ತಿರುತ್ತದೆ. ಆ ಕಾರಣಕ್ಕೆ ತನ್ನ ಸಾಮ್ರಾಜ್ಯದ ಪ್ರತಿಯೊಂದು ಮನೆಗಳಲ್ಲಿ, ಜನ ಸೇರುವ ಕಡೆಗಳಲ್ಲಿಯೂ ಟೆಲಿಸ್ಕ್ರೀನ್‌ಗಳನ್ನು ಅಳವಡಿಸುತ್ತಾನೆ. ಇದು ಪ್ರತಿಯೊಬ್ಬರ ಚಲನವಲನಗಳ ಮೇಲೆ ಕಣ್ಣಿಡುತ್ತಾನೆ. ಇದು ಬಿಗ್‌ಬಾಸ್‌ನಲ್ಲಿ ಕೆಮರಾಗಳಾಗಿ ಸದಸ್ಯರುಗಳ ಚಲನವಲನಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ. ಬಿಗ್‌ ಬ್ರದರ್‌ಗೆ ಅತೀವ ನಂಬಿಕೆಯುಳ್ಳವರನ್ನು ಗೌಪ್ಯವಾಗಿ ಜನರ ಮಧ್ಯೆ ಬಿಡಲಾಗುತ್ತದೆ. ಈ ಪರಿಪಾಠ/ಅಂಶವನ್ನು ನಾವು ಬಿಗ್‌ಬಾಸ್‌ ನಲ್ಲಿಯೂ ಗಮನಿಸಬಹುದು. 

ಬಿಗ್‌ಬ್ರದರ್‌ನ ವ್ಯವಸ್ಥೆಯ ಪ್ರಕಾರ ತನ್ನ ಸಾಮ್ರಾಜ್ಯ ದಲ್ಲಿ ಯಾರೂ ಕೂಡ ಆರಾಮದಲ್ಲಿರಬಾರದು. ತನ್ನ ಪ್ರಜೆಗಳು ಸ್ವಚ್ಚಂದ‌ವಾಗಿ ಜೀವನ ಸಾಗಿಸಲು ಆತ ಬಯಸುವುದಿಲ್ಲ. ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಭಾಷೆಯ ಸ್ವರೂಪದಲ್ಲಿ ಅಧಿಪತ್ಯ ಸಾಧಿಸುತ್ತಾನೆ. ಭಾಷೆಯ ಕೋಶಮಾಲಿಕೆಯಲ್ಲಿ ಸ್ವಾತಂತ್ರ್ಯ ಮತ್ತು ವ್ಯಕ್ತಿಗೆ ಆಸೆಗಳನ್ನು ನೀಡುವಂತಹ ಪದಗಳನ್ನು ತೆಗೆದು ಹಾಕುತ್ತಾನೆ. ಥಾಟ್‌ ಪೊಲೀಸ್‌ ಎಂಬ ಗೂಢ‌ಚರ್ಯರನ್ನು ಜನರೊಂದಿಗೆ ಬಿಡುತ್ತಾನೆ. ಯಾರಾದರೂ ಮುಂದಿನ ದಿನಗಳ ಕುರಿತು ಚಿಂತನೆಗಳಲ್ಲಿ ತೊಡಗಿದ್ದರೆ ಅಂಥವರನ್ನು ಬಿಗ್‌ ಬ್ರದರ್‌ ಮುಂದೆ ನಿಲ್ಲಿಸಲಾಗುತ್ತದೆ. ಸಣ್ಣಪುಟ್ಟ ಮಕ್ಕಳನ್ನು ಆ ಕೆಲಸಕ್ಕೆ ನಿಯುಕ್ತಿಗೊಳಿಸಿ, ತಮ್ಮ ಮನೆಮಂದಿಯನ್ನೇ ಗೂಢಚರ್ಯೆ ಮಾಡಲಾಗಿತ್ತು. ಇದೊಂದು ವಿಡಂಬನಾತ್ಮಕ ಕಾದಂಬರಿ ಎನ್ನುವುದಕ್ಕೆ ಪುಷ್ಠಿ ನೀಡುತ್ತದೆ. ಸಂಸಾರದಲ್ಲಿ ಸುಖ ಪಡೆಯಬಾರದೆಂಬ ಕಾರಣಕ್ಕೆ ಲೈಂಗಿಕ ಸಂಬಂಧವನ್ನು ಹೊಂದುವುದು ಘೋರ ಅಪರಾಧ ಎಂಬ ಆದೇಶವನ್ನು ನೀಡುತ್ತಾನೆ. 

ಬಿಗ್‌ಬಾಸ್‌ನಲ್ಲಿಯೂ ಸಂಸಾರದ ಸಂಯೋಗದಿಂದ ಒಂದಷ್ಟು ದಿನದ ಮಟ್ಟಿಗೆ ಹೊರಗಿರಬೇಕಾಗುತ್ತದೆ. ಬಿಗ್‌ ಬ್ರದರ್‌ನ ಪರಿಕಲ್ಪನೆಯ ಪ್ರಕಾರ ಪ್ರಜೆಗಳು ಸುಖ-ನೆಮ್ಮದಿ ಯೊಂದಿಗೆ ಜೀವನ ನಡೆಸಿದಾಗ ಆಸೆಗಳು ಮತ್ತು ಪಡೆಯುವ ತುಡಿತ ಜಾಸ್ತಿಯಾಗುತ್ತದೆ. ಹೀಗೆ ಬಿಗ್‌ಬ್ರದರ್‌ ಮತ್ತು ಬಿಗ್‌ಬಾಸ್‌ ನಡುವೆ ತುಂಬಾ ಸಾಮ್ಯತೆಗಳಿವೆ.

ಪ್ರತಿಬಾರಿಯೂ ಬಿಗ್‌ಬಾಸ್‌ ಕಾರ್ಯಕ್ರಮ ನೋಡುತ್ತಿರುವಾಗ ನಾನು ಓದಿದ ಆಂಗ್ಲ ಕಾದಂಬರಿಯ ದೃಶ್ಯಗಳು ನನ್ನನ್ನ ಮತ್ತೆ 1984 ನತ್ತ ಕೊಂಡೊಯ್ಯುತ್ತದೆ. ಜಾರ್ಜ್‌ ಆರೆÌಲ್‌ನ ಬಿಗ್‌ ಬ್ರದರ್‌ ಕಾನ್ಸೆಪ್ಟ್ನ ನೆನಪಾಗುತ್ತದೆ. ಓರ್ವ ವ್ಯಕ್ತಿಗೆ ಆತ್ಮಗೌರವ, ವೈಯಕ್ತಿಕ ವಿಚಾರ ಆಸೆಗಳನ್ನು ಈಡೇರಿಸಲು ಅವಕಾಶ ನೀಡದೇ ಇದ್ದಾಗ ಆ ಜೀವನ ಹೇಗಿರಬಹುದು. ಪ್ರತಿಯೊಂದು ಹೆಜ್ಜೆಗಳಲ್ಲೂ ಒಬ್ಬನ ಅದೇಶಗಳನ್ನು ಪಾಲನೆ ಮಾಡುತ್ತಾ ಇದ್ದಾಗ, ಬದುಕಿದ್ದು ಏನು ಪ್ರಯೋಜನ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ಬಿಗ್‌ಬಾಸ್‌ ಮತ್ತು ಜಾರ್ಜ್‌ ಆರೆಲ್‌ನ 1984 ಸ್ವರೂಪದಲ್ಲಿ ಒಂದೇ ಆಗಿದೆ.

– ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು
ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next