Advertisement
ಬಹುಶಃ ಕಳೆದೊಂದು ವರ್ಷದ ಭಾರತ-ಅಮೆರಿಕ ನಡುವಿನ ಸಂಬಂಧದಲ್ಲಿ ಈ ಸಾಫ್ಟ್ವೇರ್ ಎಂಜಿನಿಯರ್ ಪ್ರಮುಖ ಪಾತ್ರವಹಿಸುವ ಮೀಟುಗೋಲಾಗಿದ್ದರು ಎನಿಸುತ್ತದೆ. ಏಕೆಂದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜಿಸಿದ್ದರು, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ರನ್ನು “ಗೆಳೆಯ’ ಎಂದು ಕರೆದಿದ್ದರು ಎನ್ನುವುದೇನೋ ಸರಿ. ಆದರೆ, ಅಮೆರಿಕದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಎಚ್1-ಬಿ ವೀಸಾ ಮೇಲೆ ಹಾಗೂ ಈ ವೀಸಾ ಇರುವವರು ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯ ಮೇಲೆ ತಡೆ ಹೇರಲಾಗಿದೆ. ಇದರಿಂದಾಗಿ, ಲಕ್ಷಾಂತರ ಭಾರತೀಯ ಸಾಫ್ಟ್ವೇರ್ ತಂತ್ರಜ್ಞರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ ಮತ್ತು ಕೋವಿಡ್-19 ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಟ್ರಂಪ್ ಆಡಳಿತದ ಈ ನಡೆಗಳು ಅಪಾರ ಆಘಾತ ಉಂಟುಮಾಡಿವೆ.
Related Articles
Advertisement
ಅಮೆರಿಕದಲ್ಲಿರುವ ಭಾರತೀಯ ಸಮುದಾಯಕ್ಕೆ ಮೊದಲು ಹಾಗೂ ಅತ್ಯಂತ ತುರ್ತಾಗಿ ಬಗೆಹರಿಯಬೇಕಾದ ಸಂಗತಿಯೆಂದರೆ, ಎಚ್1-ಬಿ ವೀಸಾ ಮೇಲೆ ಹೇರಲಾಗಿರುವ ತಡೆಯನ್ನು ತೆರವುಗೊಳಿಸುವುದು ಮತ್ತು ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗದಲ್ಲಿರುವ ಭಾರತೀಯ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವುದು. ಈ ವಲಯದಲ್ಲಿರುವ ಭಾರತೀಯ ಸಮುದಾಯ ಕಮಲಾರನ್ನು ತಮ್ಮವರು ಎಂದು ಒಪ್ಪಿಕೊಂಡಿದ್ದು, ವೀಸಾ ಮೇಲಿನ ನಿರ್ಬಂಧ ತೆರವಿನ ವಿಚಾರದಲ್ಲಿ “ಭರವಸೆ ಈಡೇರಿಸಿ’ ಎಂದು ಡೆಮಾಕ್ರಾಟ್‌ಗಳ ಮೇಲೆ ಒತ್ತಡ ತರುವ ಸಾಧ್ಯತೆ ಅಧಿಕವಿದೆ. ಆದರೆ ಸಾಂಕ್ರಾಮಿಕವು ಅಮೆರಿಕದಲ್ಲಿನ ಲಕ್ಷಾಂತರ ಉದ್ಯೋಗಗಳನ್ನು ನಷ್ಟ ಮಾಡಿರುವ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎನ್ನುವ ಬಗ್ಗೆ ಬೈಡೆನ್ ಯೋಚಿಸಬೇಕಿದೆ. ಆದಾಗ್ಯೂ ಈಗ ಟೆಕ್ ಸೆಕ್ಟರ್‌ನಲ್ಲಿ ನೇಮಕಾತಿಗಳು ಮುಂದುವರಿದಿವೆಯಾದರೂ ಉದ್ಯೋಗ ಮಾರುಕಟ್ಟೆಯಂತೂ ಅತ್ಯಂತ ಬಿಗುವಾಗಿಯೇ ಇದೆ.
ಭಾರತ-ಅಮೆರಿಕ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದಾದ ಇನ್ನೆರಡು ಅಂಶಗಳೆಂದರೆ ಕಾಶ್ಮೀರ ಮತ್ತು ಚೀನದ ವಿಚಾರ. ಬೈಡೆನ್ ಮತ್ತು ಕಮಲಾ ಅಂತೂ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅತ್ಯಂತ ಸ್ಪಷ್ಟ ನಿಲುವು ಹೊಂದಿದ್ದಾರೆ. ಆರ್ಟಿಕಲ್ 370 ರದ್ದತಿ ಹಾಗೂ ಜಮ್ಮು- ಕಾಶ್ಮೀರವನ್ನು ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವಾಗಿಸಿರುವ ಮೋದಿ ಸರಕಾರದ ಕ್ರಮವು “ತಪ್ಪು’ ಎಂದು ಅವರು ಪರಿಗಣಿಸುತ್ತಾರೆ. ಮುಸ್ಲಿಂ ಅಮೆರಿಕನ್ನರಿಗಾಗಿ ರೂಪಿಸಿದ ಅಜೆಂಡಾದಲ್ಲೂ ಬೈಡೆನ್ ಅವರು “”ಭಾರತ ಸರಕಾರ ಜಮ್ಮು ಕಾಶ್ಮೀರಿಗರ ಹಕ್ಕುಗಳನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.
ಟ್ರಂಪ್ ಅವರು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂಬ ಆರೋಪಗಳ ಬಗ್ಗೆಯಾಗಲಿ ಅಥವಾ ವಿವಿಧ ವಿಷಯಗಳಿಂದಾಗಿ ಭಾರತದಲ್ಲಿ ಆಗುತ್ತಿರುವ ಕೋಮು ಲಿಂಚಿಂಗ್(ಥಳಿಸಿ ಹತ್ಯೆ) ಪ್ರಕರಣಗಳ ಬಗ್ಗೆಯಾಗಲಿ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ ಕಮಲಾ ಹ್ಯಾರಿಸ್, ಬೈಡೆನ್ ಮತ್ತು ಅವರ ಡೆಮಾಕ್ರಟಿಕ್ ಪಕ್ಷವು ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಬಲಿಷ್ಠ ನಿಲುವು ತಾಳಿದ್ದಾರೆ. 2019ರ ಅಕ್ಟೋಬರ್ ತಿಂಗಳಲ್ಲಿ ಕಮಲಾ-“”ಈ ಜಗತ್ತಿನಲ್ಲಿ ನೀವು ಒಂಟಿಯಲ್ಲ ಎಂದು ನಾವು ಕಾಶ್ಮೀರಿಗಳಿಗೆ ನೆನಪಿಸಬೇಕಿದೆ” ಎಂದಿದ್ದರು. ಆದರೆ ಈ ವಿಚಾರವಾಗಿ ಡೆಮಾಕ್ರಟಿಕ್ ಪಕ್ಷ ಮುಂದೆಯೂ ಪ್ರಬಲ ಸಂದೇಶಗಳನ್ನು ನೀಡುವುದಕ್ಕಿಂತ ಹೆಚ್ಚಿನದೇನನ್ನೂ ಮಾಡುವ ಸಾಧ್ಯತೆ ಇಲ್ಲ. ಆದರೂ ಈ ಸಂಗತಿಗಳಂತೂ ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಲಿವೆ.
ಚೀನದ ವಿಚಾರದಲ್ಲಿ ಟ್ರಂಪ್ ಮತ್ತು ಬೈಡೆನ್‌ರ ನಿಲುವು ಒಂದೇ ರೀತಿಯಿದೆ. ಇವರಿಬ್ಬರಿಗೂ ಚೀನದ ಮೇಲೆ ಅನುಮಾನವಿದೆ. ಆದರೆ ಬೈಡೆನ್ ಸ್ವಲ್ಪ ಸಮಾಧಾನಕರ ಧ್ವನಿಯಲ್ಲಿ ಮಾತನಾಡುವ ಸಾಧ್ಯತೆ ಇದೆ, ಅಲ್ಲದೇ ಒಂದು ವೇಳೆ ಭಾರತವೇನಾದರೂ ಚೀನ ವಿರುದ್ಧ ಬಲಿಷ್ಠ ನಿಲುವು ಮುಂದುವರಿಸಿದರೂ, ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಪ್ರಯತ್ನಿಸಬಹುದು. ಇದೇನೇ ಇದ್ದರೂ ಚೀನ ವಿಚಾರದಲ್ಲಿ ಭಾರತ-ಅಮೆರಿಕದ ನಡುವೆ ಮೂರು ಒಪ್ಪಂದಗಳಾಗಿದ್ದು (ಮೋದಿ- ಟ್ರಂಪ್ ಸಹಿಹಾಕಿದ್ದರು), ಈ ಒಪ್ಪಂದಗಳನ್ನು ಬೈಡೆನ್ ಗೌರವಿಸುವ ಸಾಧ್ಯತೆಯಿದೆ.
ಇನ್ನು ಸಾಂಕ್ರಾಮಿಕ ಉಂಟುಮಾಡಿದ ಕುಸಿತದಿಂದ ಹೊರಬರಲು ಭಾರತ ಮತ್ತು ಅಮೆರಿಕ ಪ್ರಯತ್ನಿಸುತ್ತಿವೆಯಾದ್ದರಿಂದ, ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿನ ಆರ್ಥಿಕ ಆಯಾಮ ಬಹಳ ಗುಣಾತ್ಮಕವಾಗಿ ಗೋಚರಿಸುತ್ತಿದೆ.
ಒಬಾಮಾರ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಬೈಡೆನ್ ಭಾರತದೊಂದಿಗೆ ಆರ್ಥಿಕ ಸಂಬಂಧ ಹೆಚ್ಚಿಸುವ ವಿಚಾರದಲ್ಲಿ ಬಹಳ ಸಕ್ರಿಯರಾಗಿದ್ದರು. ಈ ಕಾರಣಕ್ಕಾಗಿ ಅವರು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಜನವರಿಯಲ್ಲಿ ಶ್ವೇತಭವನ ಪ್ರವೇಶಿಸಲು ಬೈಡೆನ್ ಸಿದ್ಧತೆ ನಡೆಸಿರುವ ಈ ಹೊತ್ತಲ್ಲೇ, ಭಾರತ ಮತ್ತು ಅಮೆರಿಕದಲ್ಲಿನ ಉದ್ಯಮ ಸಮೂಹವು ಆ ವಿಚಾರವನ್ನು ನೆನಪು ಮಾಡಿಕೊಳ್ಳುತ್ತಿವೆ.
(ಲೇಖಕರು ಕರ್ನಾಟಕದ ಮಾಜಿ ಪತ್ರಕರ್ತರಾಗಿದ್ದು, ಪ್ರಸಕ್ತ ಅಮೆರಿಕದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)
ಸೌಮ್ಯ ಆಜಿ, ಅಮೆರಿಕ