Advertisement

Illegal Gun Purchase case: ಬೈಡನ್‌ ಬೇಷರತ್‌ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!

01:11 PM Dec 02, 2024 | Team Udayavani |

ವಾಷಿಂಗ್ಟನ್:‌ ಅಕ್ರಮ ಬಂದೂಕು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿರ್ಗಮನ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ಪುತ್ರನಿಗೆ ಪೂರ್ಣ ಪ್ರಮಾಣದ ಬೇಷರತ್‌ ಕ್ಷಮಾದಾನ ನೀಡಿ, ಆದೇಶಕ್ಕೆ ಸಹಿ ಹಾಕಿದ್ದು, ಈ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.

Advertisement

ನನ್ನ ಪುತ್ರ ಎಂಬ ಏಕೈಕ ಕಾರಣಕ್ಕೆ ಆತನನ್ನು ಗುರಿ ಮಾಡಲಾಗಿತ್ತು ಎಂದು ಬೈಡನ್‌ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಇಡೀ ಜೀವನವನ್ನು ನಾನು ಸರಳತೆಯಿಂದ ಕಳೆದಿದ್ದೇನೆ. ನಾನು ಮುಕ್ತ ಮನಸ್ಸಿನಿಂದ ಅಮೆರಿಕದ ಜನತೆಗೆ ಸತ್ಯವನ್ನು ತಿಳಿಸಬೇಕಾಗಿದೆ.

ನಾನು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೊಂದಿದ್ದೇನೆ. ಆದರೆ ಈ ಘಟನೆಯ ವಿರುದ್ಧ ನಾನು ಹೋರಾಡಬೇಕಾಗಿದೆ. ಇದಕ್ಕೆ ರಾಜಕೀಯದ ತಿಕ್ಕಾಟವೂ ಕಾರಣವಾಗಿರಬಹುದು. ಇದರ ಪರಿಣಾಮ ನ್ಯಾಯದ ಹಳಿ ತಪ್ಪಲು ಎಡೆಮಾಡಿಕೊಟ್ಟಿತ್ತು. ಅದಕ್ಕಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಬೈಡನ್‌ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೈಡನ್‌ ಪುತ್ರ ಫೆಡರಲ್‌ ಗನ್‌ ಮತ್ತು ಟ್ಯಾಕ್ಸ್‌ ಆರೋಪ ಎದುರಿಸುತ್ತಿದ್ದು, ಕ್ಯಾಲಿಫೋರ್ನಿಯಾ ಕೋರ್ಟ್‌ ಗೆ ಹಾಜರಾಗಲು ಸಿದ್ಧತೆ ನಡೆಸುತ್ತಿದ್ದು, ದೀರ್ಘಾವಧಿಯ ಜೈಲುಶಿಕ್ಷೆ ಭೀತಿ ಎದುರಿಸುತ್ತಿರುವುದಾಗಿ ವರದಿ ವಿವರಿಸಿದೆ.

Advertisement

ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಜಸ್ಟೀಸ್‌ ಡಿಪಾರ್ಟ್‌ ಮೆಂಟ್‌ ನ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದ್ದೆ. ನನ್ನ ಮಗನನ್ನು ದುರುದ್ದೇಶಪೂರ್ವಕವಾಗಿ ಆರೋಪಿ ಎಂದು ಪರಿಗಣಿಸಿದಾಗಲೂ ಮೌನವಾಗಿದ್ದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ವಿರೋಧಿಸಲು ವಿಪಕ್ಷ ಈ ಆರೋಪ ಮಾಡಿರುವುದಾಗಿ ಬೈಡನ್‌ ದೂರಿದ್ದಾರೆ.

ನನ್ನ ಪುತ್ರ ಹಂಟರ್‌ ಬೈಡನ್‌ ಕ್ಷಮಾದಾನದ ಆದೇಶಕ್ಕೆ ಸಹಿ ಹಾಕಿದ್ದೇನೆ. ಇದು ಪೂರ್ಣ ಪ್ರಮಾಣದ ಮತ್ತು ಬೇಷರತ್‌ ಕ್ಷಮಾದಾನವಾಗಿದೆ ಎಂದು ಬೈಡನ್‌ ಪ್ರಕಟನೆ ತಿಳಿಸಿದೆ. ಕ್ಷಮಾದಾನ ನೀಡುವ ಮೂಲಕ ಹಂಟರ್‌ ಬೈಡನ್‌ ತನ್ನ ಅಪರಾಧದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಹಾದಿ ಸುಗಮವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next