ಬೀದರ: ನ್ಯಾಯ ಸಮ್ಮತ ಪರಿಹಾರ ಕುರಿತಂತೆ ಕಾರಂಜಾ ಸಂತ್ರಸ್ತರ ಬೇಡಿಕೆಯನ್ನು ವಿಶೇಷ ಪ್ರಕರಣವನ್ನು ಪರಿಗಣಿಸಿ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುವ ಕುರಿತು ಆಶ್ವಾಸನೆ ನೀಡಿರುವ ಜಲ ಸಂಪನ್ಮೂಲ ಸಚಿವರಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ ಅವರು ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಮಂಗಳವಾರ ಜಿಲ್ಲೆಯ ಸಚಿವರು, ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕಾರಂಜಾ ಸಂತ್ರಸ್ತರ ನಿಯೋಗದ ಸದಸ್ಯರನ್ನೊಳಗೊಂಡು ಸಭೆ ನಡೆಸಿರುವ ಡಿಸಿಎಂ ಶಿವಕುಮಾರ ಅವರು, ಕಾರಂಜಾ ಯೋಜನೆ ಮತ್ತು ಜಮೀನು ಕಳೆದುಕೊಂಡಿರುವ ರೈತರಿಗೆ ಆಗಿರುವ ಅನ್ಯಾಯದ ಕುರಿತು ಸಮಗ್ರ ಮಾಹಿತಿ ಪಡೆದರು. ಜಲಾಶಯಕ್ಕಾಗಿ ಅಮೂಲ್ಯ ಜಮೀನು ಕಳೆದುಕೊಂಡಿರುವ ರೈತರು ಬಡವರಾಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಹಾನುಭೂತಿಯಿಂದ ಈ ಪ್ರಕರಣವನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ, ಶರಣು ಸಲಗರ್, ಎಂಎಲ್‌ಸಿ ಅರವಿಂದಕುಮಾರ ಅರಳಿ, ಭೀಮರಾವ್ ಪಾಟೀಲ ಮತ್ತು ಚಂದ್ರಶೇಖರ ಪಾಟೀಲ ಅವರು, ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಕುರಿತು ಮನವರಿಕೆ ಮಾಡಿದರು. ಪರಿಹಾರ ನೀಡಿಕೆಯಲ್ಲಿ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಸ್ವಾಭಾವಿಕ ನ್ಯಾಯದಡಿಯಲ್ಲಿ ಈ ಅಶಕ್ತ ರೈತರಿಗೂ ಹೆಚ್ಚಿನ ಪರಿಹಾರ ನೀಡುವುದು ನ್ಯಾಯೋಚಿತವಾಗಿದೆ. ಕೋರ್ಟ್ ತೀರ್ಪಿನ ಅನ್ವಯ ಗರಿಷ್ಠ ಪರಿಹಾರ ನೀಡಿರುವ ರೀತಿಯಲ್ಲಿಯೇ ಒಂದು ಬಾರಿಯ ವಿಶೇಷ ಪ್ಯಾಕೇಜ್ ಘೋಷಿಸಿ, ಕಾರಂಜಾ ಯೋಜನೆಗಾಗಿ, ಭೂಮಿ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಕೋರಿದರು.
ಸಂತ್ರಸ್ತರ ನಿಯೋಗದ ನೇತೃತ್ವ ವಹಿಸಿದ್ದ ಲಕ್ಷ್ಮಣ ದಸ್ತಿ ಅವರು, ಕಾರಂಜಾ ಯೋಜನೆಗಾಗಿ ಜಮೀನು ಕೊಟ್ಟ ರೈತರು ವೈಜ್ಞಾನಿಕ ಪರಿಹಾರ ಸಿಗದೇ ಸಂತ್ರಸ್ತರಾಗಿದ್ದು, ಉದ್ಯೋಗಕ್ಕಾಗಿ ಗುಳೆ ಹೋಗಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಸಲು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಹಾಗಾಗಿ ಮಾನವೀಯತೆ ಆಧಾರದಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಾರಂಜಾ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಾಲೋಚನೆ ನಡೆಸಿದ ಡಿಕೆಶಿ, ನೀರಾವರಿ ಮತ್ತು ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಜತೆಗೆ ಕಾರಂಜಾ ಸಂತ್ರಸ್ತರ ಬೇಡಿಕೆ ಕುರಿತು ಚರ್ಚಿಸಲಾಗುವುದು. ಜತೆಗೆ ಮುಖ್ಯಮಂತ್ರಿಗಳ ಜತೆ ಸಹ ಸಮಾಲೋಚನೆ ನಡೆಸಲಾಗುವುದು. ರಾಜ್ಯದ ಇತರೆ ನೀರಾವರಿ ಯೋಜನೆಗಳ ಸಂತ್ರಸ್ತರು ಸಹ ಈ ರೀತಿ ಪರಿಹಾರಕ್ಕೆ ಒತ್ತಾಯಿಸಬಹುದು. ಹಾಗಾಗಿ ಸೂಕ್ಷ್ಮವಾಗಿ, ಕಾನೂನು ವ್ಯಾಪ್ತಿಯಲ್ಲಿ ಬೇಡಿಕೆ ಬಗೆಹರಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಸಂತ್ರಸ್ತರಿಗೆ ಅಹೋರಾತ್ರಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಮುಖರಾದ ನಾಗಶೆಟ್ಟಿ ಹಂಚೆ, ವಿನಯ್ ಮಾಳಗೆ, ರೋಹನ್ ಕುಮಾರ್, ಮಲ್ಲಿಕಾರ್ಜುನ ಬುಸೋನೋರ್, ಮಹೇಶ ಮೂಲಗೆ, ಕೇದಾರನಾಥ ಪಾಟೀಲ, ರಾಜಪ್ಪ ಕಮಲ್ಪೂರ್, ವೀರಶೆಟ್ಟಿ ಮೂಲಗೆ, ರಾಮರೆಡ್ಡಿ ಪಾಟೀಲ, ಭೀಮರೆಡ್ಡಿ, ಪ್ರಕಾಶ ಖೇಣಿ, ಈಶ್ವರಯ್ಯ ಸ್ವಾಮಿ ಮತ್ತಿತರರಿದ್ದರು.
ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಅತ್ಯಲ್ಪ ಪರಿಹಾರವನ್ನಷ್ಟೇ ನೀಡಲಾಗಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸಿದವರಿಗೆ ಹೆಚ್ಚುವರಿ ಪರಿಹಾರ ನೀಡಲಾಗಿದೆ. ಪರಿಹಾರ ನೀಡಿಕೆಯಲ್ಲಿ ಅವರಿಗೆ ಅನ್ಯಾಯವಾಗಿದೆ. ಹೀಗಾಗಿ ಒಂದು ಬಾರಿಯ ಪ್ಯಾಕೇಜ್ ಘೋಷಿಸಿ, ಅನ್ಯಾಯಕ್ಕೆ ಒಳಗಾದ ಅನ್ನದಾತರಿಗೆ ನ್ಯಾಯ ಒದಗಿಸಬೇಕು.
-ಈಶ್ವರ ಖಂಡ್ರೆ, ಉಸ್ತುವಾರಿ ಸಚಿವ.
ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಬಹಳಷ್ಟು ಸಂತ್ರಸ್ತರು ಬೀದರ ದಕ್ಷಿಣ ಕ್ಷೇತ್ರದವರು. ನ್ಯಾಯ ಸಮ್ಮತ ಪರಿಹಾರಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪ್ಯಾಕೇಜ್ ಘೋ?ಣೆ ಮಾಡುವ ಮೂಲಕ ಧೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
-ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕ.