ಬೀದರ: ಮಹಾಮಾರಿ ಕೋವಿಡ್ ವೈರಸ್ ಸೃಷ್ಟಿಸಿರುವ ತಲ್ಲಣದಿಂದ ರೆಡ್ ಝೋನ್ (ಹಾಟ್ ಸ್ಪಾಟ್) ಪಟ್ಟಿಗೆ ಸೇರಿರುವ ಪ್ರವಾಸಿ ಜಿಲ್ಲೆ ಬೀದರ ಈಗ ಕೋವಿಡ್-19 ನಿಯಂತ್ರಣದತ್ತ ಹೆಜ್ಜೆಯನ್ನಿಡುತ್ತಿದೆ. ಸೋಂಕಿನ ವಿರುದ್ಧ ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಅಗತ್ಯ ಸಿದ್ಧತೆಯೊಂದಿಗೆ ಸಮರ ಹೀಗೆ ಪರಿಣಾಮಕಾರಿಯಾಗಿದ್ದರೆ ಶೀಘ್ರವೇ ಅರೆಂಜ್ ಝೋನ್‌ನಲ್ಲಿ ಸೇರುವ ಆಶಾಭಾವ ಮೂಡುತ್ತಿದೆ.
ವಿಶ್ವದೆಲ್ಲೆಡೆ ಸಾವಿನ ರಣಕೇಕೆ ಹಾಕುತ್ತ ಆತಂಕ ಸೃಷ್ಟಿಸಿರುವ ಕೋವಿಡ್ ವೈರಸ್ ಕಳೆದ 22 ದಿನಗಳ ಹಿಂದೆಯೇ ಬೀದರ ಜಿಲ್ಲೆಗೂ ಒಕ್ಕರಿಸಿ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಈವರೆಗೆ ಜಿಲ್ಲೆಯಲ್ಲಿ 15 ಜನರಲ್ಲಿ ವೈರಸ್ ಕಾಣಿಸಿಕೊಂಡು ಭೀತಿ ಹೆಚ್ಚಿಸಿತ್ತು. ಆದರೆ, ಬುಧವಾರ ಸಂಜೆ 9 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜತೆಗೆ ಸಾವಿನ ಪ್ರಕರಣ ಆಗದಿರುವುದು ಮತ್ತು ಕಳೆದ ಮೂರು ದಿನದಿಂದ ಹೊಸ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣ ವಿಷಯದಲ್ಲಿ ಆಶಾದಾಯಕ ಬೆಳವಣಿಗೆ ಆಗಿದ್ದು, ಜಿಲ್ಲಾಧಿಕಾರಿ ಡಾ| ಎಚ್.ಸಿ. ಮಹಾದೇವ ನೇತೃತ್ವದ ಅಧಿಕಾರಿಗಳ ತಂಡದ ದಿಟ್ಟ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ದೆಹಲಿ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಘಿ ಜಮಾತ್ ಸಮಾವೇಶದ ನಂಜು ಬೀದರ ಜಿಲ್ಲೆಗೆ ಬೆಂಬಿಡದೆ ಕಾಡುತ್ತ ಬಂದಿದ್ದು, ಎಲ್ಲ 15 ಜನರು ಜಮಾತ್‌ನಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದವರೇ ಆಗಿದ್ದಾರೆ. ಇದರಲ್ಲಿ ಬೀದರನ ಓಲ್ಡ್ ಸಿಟಿಯ 13 ಜನ ನಿವಾಸಿಗಳಿದ್ದರೆ, ಇನ್ನುಳಿದ ಇಬ್ಬರು ಬಸವಕಲ್ಯಾಣ ಮತ್ತು ಮನ್ನಾಎಖ್ಖೆಳ್ಳಿ ಪಟ್ಟಣಕ್ಕೆ ಸೇರಿದ್ದಾರೆ. ಏ. 2ರಂದು ಏಕಕಾಲಕ್ಕೆ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಏ. 11ಕ್ಕೆ ಒಂದು, ಏ. 13ಕ್ಕೆ ಇಬ್ಬರು, ಏ. 17 ಮತ್ತು 20ರಂದು ತಲಾ ಒಂದೊಂದು ಪ್ರಕರಣಗಳು ವರದಿಯಾಗಿದ್ದವು. ಒಂದೇ ದಿನ ಅತಿ ಹೆಚ್ಚು ಸೋಂಕಿತರ ವರದಿಯಿಂದ ಬೀದರ ರಾಜ್ಯದ ಗಮನ ಸೆಳೆಯುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ವೈರಸ್ ಮತ್ತಷ್ಟು ಹರಡದಂತೆ ಬಿಗಿ ಕ್ರಮ ಕೈಗೊಳ್ಳುತ್ತ ಬಂದಿದೆ. ಸೋಂಕಿತರು ವಾಸಿಸುವ ಮೂರು ಪ್ರದೇಶಗಳನ್ನು ಕೂಡಲೇ ಕಂಟೈನ್ಮೆಂಟ್ ಮತ್ತು ಬಫರ್ ಝೋನ್ ಏರಿಯಾ ಎಂದು ಗುರುತಿಸಿ ಸಿಲ್ ಡೌನ್ ಮಾಡಲಾಯಿತು. ಜಿಲ್ಲೆಯ ಗಡಿ ಪ್ರವೇಶಕ್ಕೆ ನಿರ್ಬಂಧ, ಲಾಕ್‌ಡೌನ್ ಜಾರಿಯಂಥ ಕಟ್ಟೆಚ್ಚರ ವಹಿಸಲಾಯಿತು. ನಂತರ ರೆಡ್ ಝೋನ್ ಘೋಷಣೆಯಾಗುತ್ತಿದ್ದಂತೆ ಮತ್ತಿಷ್ಟು ಕ್ರಮಗಳನ್ನು ಬಿಗಿಗೊಳಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 400 ಜನರಿಗೆ ಕ್ವಾರಂಟೈನ್, ಕಂಟೈನ್ಮೆಂಟ್ ಪ್ರದೇಶದ ಜನರ ಸ್ಯಾಂಪಲ್ ಗಳ ಪರೀಕ್ಷೆ ಸೇರಿ ಅಗತ್ಯ ಚಿಕಿತ್ಸಾ ಮತ್ತು ತಪಾಸಣೆ ಕ್ರಮಗಳನ್ನು ಆರೋಗ್ಯ- ಕಂದಾಯ ಇಲಾಖೆ ಮುತುವರ್ಜಿಯೊಂದಿಗೆ ಕಾರ್ಯ ನಿರ್ವಹಿಸಿದೆ.
ಜಿಲ್ಲೆಯಲ್ಲಿ 15 ಜನ ಸೋಂಕಿತರ ಪೈಕಿ 9 ಜನರ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದ್ದು, ಈಗ ಗುಣಮುಖರಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಇವರೆಲ್ಲರೂ ಏ.2ರಂದು ಬ್ರಿಮ್ಸ್ ಕೋವಿಡ್-19 ಆಸ್ಪತ್ರೆ¿åಲ್ಲಿ ದಾಖಲಾಗಿದ್ದರು. ಈಗ ಇನ್ನುಳಿದ 6 ಜನರ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯದಲ್ಲಿಯೂ ಚೇತರಿಕೆ ಕಾಣಿಸುತ್ತಿದೆ. ಜಿಲ್ಲಾ ವೈದ್ಯ ಮತ್ತು ಸಿಬ್ಬಂದಿ ಚಿಕಿತ್ಸೆಗಾಗಿನ ಹೋರಾಟ ಫಲ ನೀಡುತ್ತಿದೆ. ಆರಂಭದಲ್ಲಿ ಕೊರೊನಾ ಶಂಕಿತ ಸೋಂಕಿತರ ಮಾದರಿ ಪರೀಕ್ಷಾ ಫಲಿತಾಂಶ ಕೈ ಸೇರಲು ವಿಳಂಬ ಆಗುತ್ತಿದ್ದರಿಂದ ಸೋಂಕು ವ್ಯಾಪಿಸುವ ಆತಂಕ ಹೆಚ್ಚಿತ್ತು. ಆದರೆ, ಈಗ ಜಿಲ್ಲಾಡಳಿತದ ಕ್ರಮದಿಂದ ಕಳೆದ ಎರಡೂ¾ರು ದಿನಗಳಿಂದ ಸೋಂಕಿತರ ಪರೀಕ್ಷೆ ಜತೆಗೆ ವರದಿಯೂ ಸಹ ಶೀಘ್ರ ಬರುತ್ತಿದೆ. ಬುಧವಾರ ಒಂದೇ ದಿನ 600ಕ್ಕೂ ಅಧಿಕ ಜನರ ವರದಿ ಬಂದಿದೆ. ಬುಧವಾರದ ವರೆಗೆ ಜಿಲ್ಲೆಯಲ್ಲಿ 2186 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 1647 ಜನರ ವರದಿ ನೆಗೆಟಿವ್ ಇದ್ದರೆ, ಇನ್ನೂ 524 ಜನರ ಸ್ಯಾಂಪಲ್ ವರದಿ
ಬರಬೇಕಿದೆ.
ಬರುವ ದಿನಗಳಲ್ಲೂ ಜಿಲ್ಲಾಡಳಿತ ಜಿಲ್ಲೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಿದೆ. ಸ್ವಲ್ಪವೇ ಯಾಮಾರಿದ್ದರೂ ಮತ್ತೆ ತಲ್ಲಣ್ಣ ಸೃಷ್ಟಿಯಾಗಬಹುದು. ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಿದ್ದಲ್ಲಿ ಬೀದರ ಆರೆಂಜ್ ಝೋನ್ (ಸಂಪೂರ್ಣ ಮುಕ್ತವೂ ಅಲ್ಲದ, ಅತಿ ಅಪಾಯಕಾರಿ ಹಂತವೂ ಅಲ್ಲದ ಸ್ಥಿತಿ) ನಲ್ಲಿ ಬರಬಹುದು. ನಂತರ ಸೋಂಕು ಮುಕ್ತ ಜಿಲ್ಲೆಯಾಗಿ ಗ್ರೀನ್ ಝೋನ್‌ಗೆ ಸೇರಬಹುದು. ಇದಕ್ಕೆ ಜಿಲ್ಲಾಡಳಿತದ ಜತೆಗೆ ಜನರ ಸಹಕಾರ ಬಹು ಮುಖ್ಯವಾಗಿದೆ.ಶಶಿಕಾಂತ ಬಂಬುಳಗೆ