ಬೀದರ: ರಾಜ್ಯದ ಏಕೈಕ ಪಶು ವಿಶ್ವವಿದ್ಯಾಲಯ ಎಂಬ ಖ್ಯಾತಿವುಳ್ಳ ಬೀದರನ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಈಗ ಪ್ರಾಧ್ಯಾಪಕರ ಕೊರತೆಯಿಂದ ನಲುಗುತ್ತಿದೆ. ವಿವಿಯಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿಯಿದ್ದು, ಬೋಧನೆ, ಅಭಿವೃದ್ಧಿ, ವಿಸ್ತರಣಾ ಚಟುವಟಿಕೆ ಹಾಗೂ ಸಂಶೋಧನಾ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ.
ಪಶು ವಿವಿ ವ್ಯಾಪ್ತಿಯಲ್ಲಿ ಒಟ್ಟು 7 ಮಹಾವಿದ್ಯಾಲಯ ಮತ್ತು 2 ಪಾಲಿಟೆಕ್ನಿಕ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಬೀದರ, ಬೆಂಗಳೂರು, ಶಿವಮೊಗ್ಗ, ಹಾಸನ, ಗದಗನಲ್ಲಿ ಪಶು ವೈದ್ಯ ಮಹಾವಿದ್ಯಾಲಯ, ಮಹಾಗಾಂವ (ಕಲಬುರಗಿ), ಬೆಂಗಳೂರಿನಲ್ಲಿ ಹೈನು ವಿಜ್ಞಾನ ಮತ್ತು ಮಂಗಳೂರಿನಲ್ಲಿ ಮೀನುಗಾರಿಕೆ ಮಹಾವಿದ್ಯಾಲಯವಿದೆ.
ವಿವಿಗೆ ಬೋಧಕ- ಬೋಧಕೇತರ ಸೇರಿ ಒಟ್ಟು 1,821 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 1292 ಹುದ್ದೆಗಳು ಖಾಲಿ ಇವೆ. ಕೇವಲ 529 ಹುದ್ದೆ ಮಾತ್ರ ಭರ್ತಿಯಾಗಿವೆ. 116 ಪ್ರೊಫೆಸರ್ ಹುದ್ದೆ ಪೈಕಿ 30 ಭರ್ತಿ ಇದ್ದರೆ, 86 ಸ್ಥಾನ ಖಾಲಿ ಇವೆ. 174 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಲ್ಲಿ 30 ಹುದ್ದೆ ತುಂಬಿದ್ದರೆ 144 ಬಾಕಿ ಇವೆ. 425 ಅಸಿಸ್ಟಂಟ್ ಪ್ರೊಫೆಸರ್ ಹುದ್ದೆ ಪೈಕಿ 185 ಭರ್ತಿ ಇದ್ದರೆ, 240 ಹುದ್ದೆ ಖಾಲಿ ಇವೆ. ಇನ್ನೂ ಒಟ್ಟು 1106 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 822 ಹುದ್ದೆ ಖಾಲಿ ಇವೆ. ಕೇವಲ 284 ಹುದ್ದೆ ಮಾತ್ರ ಭರ್ತಿ ಮಾಡಲಾಗಿದೆ.
ಅತಿಥಿಗಳ ಅವಲಂಬನೆ: ವರ್ಷದ ಹಿಂದೆ ವಿವಿಯಲ್ಲಿ ಕುಲಪತಿ ಜತೆಗೆ ವಿವಿಧ ವಿಭಾಗಗಳ ನಿರ್ದೇಶಕ, ರಿಜಿಸ್ಟ್ರಾರ್, ಮಹಾವಿದ್ಯಾಲಯದ ಡೀನ್ ಹುದ್ದೆಗಳು ಖಾಲಿಯಿಂದ ಆಡಳಿತ ವೈಖರಿ ಮೇಲೆ ಪರಿಣಾಮ ಬೀರಿತ್ತು. ನಂತರ ಎಚ್ಚೆತ್ತ ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಿತ್ತು. ಆದರೆ, ಬೋಧಕ- ಬೋಧಕೇತರ ಹುದ್ದೆಗಳತ್ತ ನಿರ್ಲಕ್ಷ್ಯ ತೋರಿತ್ತು. ಇದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಹೊಡೆತ ಬಿದ್ದಿದೆ. ಕೆಲವು ವಿಭಾಗಳಲ್ಲಿ 153 ಅತಿಥಿ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿದೆ. ಸಿಬ್ಬಂದಿ ಕೊರತೆಯಿಂದ ಬಹುತೇಕ ಹುದ್ದೆಗಳಿಗೆ ಪ್ರಭಾರ ವಹಿಸಲಾಗಿದ್ದು, ಇರುವ ನೌಕರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಜಾನುವಾರುಗಳ ಆರೋಗ್ಯ ಸಂಶೋಧನೆ ಚಟುವಟಿಕೆಗಳು ನಡೆಯುವುದರಿಂದ ಪಶು ವಿಶ್ವವಿದ್ಯಾಲಯ ಅತಿ ಮಹತ್ವದ್ದಾಗಿದೆ. ಆದರೂ ಹಲವು ವರ್ಷಗಳಿಂದ ಹುದ್ದೆಗಳನ್ನು ತುಂಬಿಕೊಳ್ಳುವಲ್ಲಿ ಸರ್ಕಾರ ನಿಷ್ಕಾಳಜಿ ತೋರುತ್ತ ಬಂದಿದೆ. ಸದ್ಯ ಈಗಿರುವ ಸಿಬ್ಬಂದಿಯಿಂದ ಕೇವಲ ಬೋಧನೆಯಷ್ಟೇ ಮಾಡಲಾಗುತ್ತಿದೆ. ಅಭಿವೃದ್ಧಿ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳಿಗೆ ಸಿಬ್ಬಂದಿಯೇ ಇಲ್ಲದಂತಾಗಿದೆ. ಜಾನುವಾರುಗಳ ಆರೋಗ್ಯ ಸಂಶೋಧನೆ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳಬೇಕಿದೆ.
ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಬೋಧಕ- ಬೋಧಕೇತರ ಸೇರಿ 1292 ಹುದ್ದೆಗಳು ಖಾಲಿ ಇರುವುದು ನಿಜ. ಬೋಧಕರ ಕೊರತೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಡಕಾಗಬಾರದು ಎಂಬ ಉದ್ದೇಶದಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 400 ಬೋಧಕ ಮತ್ತು 216 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಅಧಿಸೂಚನೆ ಪ್ರಕ್ರಿಯೆ ಜಾರಿಯಲ್ಲಿದೆ. ಕೆ.ಸಿ. ವೀರಣ್ಣ, ರಿಜಿಸ್ಟ್ರಾರ್, ಕರ್ನಾಟಕ ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
ಶಶಿಕಾಂತ ಬಂಬುಳಗೆ