Advertisement

ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅವಶ್ಯ

03:34 PM Dec 27, 2019 | Naveen |

ಬೀದರ: ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿದಾಗ ಮಾತ್ರ ಅಪರಾಧಗಳನ್ನು ಕಡಿಮೆ ಮಾಡಲು ಸಾಧ್ಯವಿದೆ. ಪೊಲೀಸ್‌ ಇಲಾಖೆಯಲ್ಲೂ ಬದಲಾವಣೆಗಳಾಗಿದ್ದು ಕರ್ನಾಟಕ ಪೊಲೀಸ್‌ ಇಂದು ಜನಸ್ನೇಹಿ ಆಗಿ ಬದಲಾಗಿದೆ ಎಂದು ವೃತ್ತ ನಿರೀಕ್ಷಕ ಕೆ.ರಾಜಣ್ಣ ಹೇಳಿದರು.

Advertisement

ನಗರದ ಗುರುಪಾದಪ್ಪಾ ನಾಗಮಾರಪಳ್ಳಿ ಸಹಕಾರ ಗ್ರಾಮೀಣಾಭಿವೃದ್ಧಿ ಅಕಾಡೆಮಿಯಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗಾಗಿ ನಡೆದ ಸಾಮಾಜಿಕ ಭದ್ರತೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ “ಅಪರಾಧ ತಡೆ’ ಕುರಿತು ಅವರು ಮಾತನಾಡಿದರು.

ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ಪತ್ತೆ ಮಾಡುವಲ್ಲಿ ಸಿಸಿ ಕ್ಯಾಮರಾಗಳು ಅತ್ಯಂತ ಮಹತ್ತರ ಪಾತ್ರ ನಿರ್ವಹಿಸುತ್ತಿವೆ. ಪ್ರತಿಯೊಂದು ಮನೆಯವರು ತಮ್ಮ ತಮ್ಮ ಮನೆಗಳ ಆವರಣದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವುದರ ಮೂಲಕ ಸುರಕ್ಷತಾ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ಮನೆ ಕಳ್ಳತನವಾದಾಗ, ಸರ ಅಪಹರಣವಾದಾಗ ಕಳ್ಳತನವಾದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಮರಳಿ ಕೊಡಲು ಕಾನೂನಾತ್ಮಕವಾಗಿಯೂ ಸಾಧ್ಯವಿದೆ. ಆದರೆ, ನಗದು ಹಣ ಮರಳಿ ಸಿಗುವುದು ಕಷ್ಟ. ಆದ್ದರಿಂದ ದೊಡ್ಡ ಮೊತ್ತದ ನಗದು ವ್ಯವಹಾರವನ್ನು ಬ್ಯಾಂಕ್‌ ಖಾತೆಗಳ ಮೂಲಕವೇ ನಿರ್ವಹಿಸಲು ಈಗ ಸಾಕಷ್ಟು ವ್ಯವಸ್ಥೆಗಳಿದ್ದು ಜನರು ತಮ್ಮ ಸುರಕ್ಷೆ ಬಗ್ಗೆ ತಾವೇ ಜಾಗರೂಕರಾಗಿರಬೇಕು ಎಂದರು.

ಅಪರಾಧಿಗಳು ಕೂಡ ನಮ್ಮ ಸಮಾಜದ ಭಾಗವೇ ಆಗಿದ್ದು, ಅವರ ಮನಸ್ಥಿತಿ ಬದಲಾಯಿಸುವ ಯತ್ನದಲ್ಲಿ ಶಿಕ್ಷೆಯ ಭಯವೂ ಒಂದು ಪ್ರಯತ್ನವೇ ಆಗಿದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

Advertisement

ಸಮಾಜದಲ್ಲಿ ಮಹಿಳಾ ದೌರ್ಜನ್ಯಗಳ ವಿರುದ್ಧ ಸಾಕಷ್ಟು ಅರಿವು ಮೂಡಿಸುವ ಕೆಲಸವಾಗುತ್ತಿದ್ದು, ಮಹಿಳೆಯರು ಕೂಡ ಸಾಮಾಜಿಕ ಚಿಂತನೆ ಬದಲಿಸುವಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ. ಇಂದು ಕೌಟುಂಬಿಕ ಕಾನೂನುಗಳಡಿ ಠಾಣೆ ಮೆಟ್ಟಲೇರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಚ್ಛೇದನಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದರಿಂದ ಶಿಷ್ಟ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕಿದೆ. ಪೋಷಕರು ಮಕ್ಕಳ ಜೊತೆ ಸೌಹಾರ್ದದಿಂದ ಹೆಚ್ಚು ಬೆರೆತು ಕುಟುಂಬಕ್ಕೂ ಸಮಯ ನೀಡಿದಾಗ ಮಕ್ಕಳ ಮನಸ್ಥಿತಿ ಬದಲಾಯಿಸಬಹುದಾಗಿದೆ ಎಂದು ಹೇಳಿದರು.

ಪಿಎಸ್‌ಐ ಮಂಜುನಾಥ ರೆಡ್ಡಿ ಅವರು ಪ್ರಮಾಣ ಪತ್ರ ವಿತರಿಸಿದರು. ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಶಿವಪುತ್ರಪ್ಪಾ ಮತ್ತು ತರಬೇತುದಾರ ವಿಶ್ವನಾಥ ಚಿಕ್ಕಬಳ್ಳಾಪುರ ಉಪಸ್ಥಿತರಿದ್ದರು. ತರಬೇತಿ ಕೇಂದ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್‌.ಜಿ. ಪಾಟೀಲ ವಂದಿಸಿದರು. ತನ್ವೀರ್‌ ರಜಾ, ಮಹಾಲಿಂಗ ಮತ್ತು ನಾಗಶಟ್ಟಿ ಘೋಡಂಪಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next