ಬೀದರ: ನೌಬಾದ್ ಮತ್ತು ಕೊಳಾರ್ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಘಟಕದವರು ತಂಬಾಕು ಮತ್ತು ಗುಟ್ಕಾ ತಯಾರಿಕೆ ಕಂಪನಿಗಳಿಗೆ ನಿವೇಶನಗಳನ್ನು ಬಾಡಿಗೆಗೆ ನೀಡುವ ಮೂಲಕ ನಿಷೇಧಿ ತ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಕಂಡುಬಂದಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಸಭೆಯ ಕಾರ್ಯಸೂಚಿಗಳನ್ನು ಓದುವ ಮೂಲಕ ಅವರು ಮಾಹಿತಿ ನೀಡಿದರು.
ತಂಬಾಕು ಮತ್ತು ಗುಟ್ಕಾ ತಯಾರಿಕೆ ಕಂಪನಿಗಳಿಗೆ ನೋಟಿಸ್ ನೀಡಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಕೂಡಲೇ ಇಂತಹ ಘಟಕಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾರಿಕಾ ಪ್ರದೇಶ ಮತ್ತು ಕೈಗಾರಿಕಾ ವಸಾಹತುಗಳಲ್ಲಿ ನಿವೇಶನ ಹಂಚಿಕೆಯಾದ ಎರಡು ವರ್ಷಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಕಡ್ಡಾಯವಿರುತ್ತದೆ. ಆದರೆ ನಿವೇಶನ ಹಂಚಿಕೆಯಾಗಿ ಹಲವು ವರ್ಷ ಕಳೆದರೂ ಕೆಲವರು ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೊಳಾರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಸಾಯನಿಕ ಕಾರ್ಖಾನೆಗಳು ಜಲ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗೆ ನಿರ್ದೇಶನ ನೀಡಿದರು.
ಕೊಳಾರ್ ಕೈಗಾರಿಕಾ ಪ್ರದೇಶ 2ನೇ ಹಂತಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ 7 ಎಕರೆ ನಿವೇಶನ ಹಂಚಿಕೆ ಮಾಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಬೀದರ ನಗರಸಭೆ ಪೌರಾಯುಕ್ತ ಬಿ.ಬಸಪ್ಪ, ಕೆಐಎಡಿಬಿ ಅಧಿಕಾರಿ ಪ್ರಕಾಶ, ಕೆಎಸ್‌ಎಫ್‌ಸಿ ಅಧಿಕಾರಿ ಪ್ರಸಾದ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಂಜಪ್ಪ, ಲೀಡ್ ಬ್ಯಾಂಕ್‌ನ ಸಂತೋಷ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕೈಗಾರಿಕಾ ಉದ್ಯಮಿಗಳು ಉಪಸ್ಥಿತರಿದ್ದರು.