Advertisement

ತಪಾಸಣಾ ಸಿಬ್ಬಂದಿ ಸುರಕ್ಷತಾ ಕ್ರಮ ಅನುಸರಿಸಲಿ

01:33 PM Mar 20, 2020 | Naveen |

ಬೀದರ: ಕರೋನಾ ವೈರಸ್‌ ನಿಯಂತ್ರಣಕ್ಕಾಗಿ ಆರೋಗ್ಯ ತಪಾಸಣೆ ಕರ್ತವ್ಯದಲ್ಲಿರುವವರು ಒಳಗೊಂಡು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಎಲ್ಲ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫ್ ರೆನ್ಸ್‌ ನಡೆಸಿ ಮಾತನಾಡಿದ ಅವರು, ಎಲ್ಲರ ಆರೋಗ್ಯ ಕಾಪಾಡಲು ಶ್ರಮಿಸುವ ವೈದ್ಯರು ಮತ್ತು ಸಿಬ್ಬಂದಿ ವೈಯಕ್ತಿಕ ಆರೋಗ್ಯ ಕಾಪಾಡಲು ಪ್ರಾಮುಖ್ಯತೆ ನೀಡಬೇಕು. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕರ್ತವ್ಯದಲ್ಲಿರುವವರು ಗ್ಲೌಸ್‌, ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳಸಬೇಕು. ನಿಯಮಾನುಸಾರ ಅವುಗಳ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಎಲ್ಲ ಕಚೇರಿಗಳಲ್ಲಿ ನೇರವಾಗಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿಶೇಷವಾಗಿ ಗ್ರೂಪ್‌ ಡಿ ದರ್ಜೆಯ ನೌಕರರಿಗೆ ಮಾಸ್ಕ್ಗಳನ್ನು ಒದಗಿಸಬೇಕು. ಕೊರೋನಾ ಸೋಂಕಿನ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಮಾಸ್ಕ್ ಧರಿಸುವುದು ಹೇಗೆ, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದನ್ನು ತಿಳಿಸಲು ತರಬೇತಿ ಏರ್ಪಡಿಸಬೇಕು ಎಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದ ಅವರು, ಸಭೆಗಳನ್ನು ಸಾಧ್ಯವಾದಷ್ಟು ತಗ್ಗಿಸಬೇಕು. ಅನಿವಾರ್ಯವಿದ್ದಲ್ಲಿ ಮಾತ್ರ ಸಭೆಗೆ ಆಗಮಿಸುವ ಎಲ್ಲರಿಗೂ ಮಾಸ್ಕ್ಗಳನ್ನು ಒದಗಿಸಬೇಕು. ಕಚೇರಿಗಳ ಆವರಣದಲ್ಲಿ ಅನಾವಶ್ಯಕ ವ್ಯಕ್ತಿಗಳು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಗೃಹ ನಿರ್ಬಂಧದಲ್ಲಿರುವ ಯಾರಲ್ಲಿಯಾದರೂ ಸೋಂಕು ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇಂತಹ ಸಂದರ್ಭದಲ್ಲಿ ರೋಗಿಯು ಯಾರನ್ನೂ ಸಂಪರ್ಕಿಸಲಿ ಎನ್ನುವ ಗೊಂದಲಕ್ಕೆ ಒಳಗಾಗದಂತಿರಲು ಅವರಿಗೆ ಸಹಾಯವಾಣಿ ಸಂಖ್ಯೆ ಅಥವಾ ವೈದ್ಯಾಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಮುಂಚಿತವಾಗಿ ನೀಡಿರಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ನಿರ್ಬಂಧದ ವ್ಯಕ್ತಿಗಳಿಗೆ ಗುರುತು: ಗೃಹ ನಿರ್ಬಂಧದಲ್ಲಿರುವ ವ್ಯಕ್ತಿ ಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಗುರುತು ಹಾಕುವ ಕೆಲಸವನ್ನು ತುರ್ತಾಗಿ ಮಾಡಬೇಕು. ಸೀಲ್‌ ತಯಾರಿಸಿ ಕೂಡಲೇ ಗುರುತು ಹಾಕಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

Advertisement

ಎಸ್‌ಪಿ ನಾಗೇಶ ಡಿ.ಎಲ್‌. ಮಾತನಾಡಿ, ಪೊಲೀಸ್‌ ಸಿಬ್ಬಂದಿ ಕೊರೋನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರೋಗ್ಯ ಸಿಬ್ಬಂದಿಗೆ ಅಗತ್ಯ ಭದ್ರತೆ ಒದಗಿಸಬೇಕು. ಗೃಹ ನಿಬಂರ್ಧಿತ ವ್ಯಕ್ತಿಗಳು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಪೊಲೀಸ್‌ ಸಿಬ್ಬಂದಿಗೆ ಅಂತಹ ವ್ಯಕ್ತಿಗಳ ಕುರಿತು ಮಾಹಿತಿ ನೀಡಲಾಗಿದೆ. ಬೀಟ್‌ ಸಿಬ್ಬಂದಿ ತಪ್ಪದೇ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಹೇಳಿದರು.

ವದಂತಿ ಹರಡಿಸಿದರೆ ಕ್ರಮ: ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಕೊರೋನಾ ವೈರಸ್‌ ಸೋಂಕಿನ ಕುರಿತು ವದಂತಿಗಳನ್ನು ಹರಡಿಸಿ ಜನರಲ್ಲಿ ಭಯ ಹುಟ್ಟಿಸುತ್ತಿರುವುದು ಕಂಡುಬಂದಿದೆ. ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್‌ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೂ ಸಹ ಕರೋನಾ ವೈರಸ್‌ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದು ತಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ ಶ್ರೀಧರ್‌, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಬ್ರಿಮ್ಸ್‌ ನಿರ್ದೇಶಕ ಡಾ| ಶಿವಕುಮಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ರತಿಕಾಂತ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next