ಬೀದರ: ಶೀಘ್ರ ಬೆಂಗಳೂರಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆಗೆ ವ್ಯವಸ್ಥೆ ಮಾಡಿಸಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ಸುಧಾರಣೆ ಬಗ್ಗೆ ಚರ್ಚಿಸಿ ಅವ್ಯವಸ್ಥೆಗೆ ಲಗಾಮು ಹಾಕುವುದಾಗಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ|ಕೆ. ಸುಧಾಕರ ಹೇಳಿದರು.
ನಗರದ ಬ್ರಿಮ್ಸ್ ಬೋಧಕ ಆಸ್ಪತ್ರೆ ಸಭಾಂಗಣದಲ್ಲಿ ರವಿವಾರ ನಡೆದ ಸಭೆಯಲ್ಲಿ ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಎಲ್ಲ ಶಾಸಕರು ಅಸಮಾಧಾನ ಹೊರ ಹಾಕಿದಾಗ ಬ್ರಿಮ್ಸ್‌ನ್ನು ಸರಿದಾರಿಗೆ ತರಲು ತಾವು ಈ ವಿಷಯವನ್ನು ಸವಾಲಾಗಿ ಸ್ವೀಕರಿಸುವುದಾಗಿ ಭರವಸೆ ನೀಡಿದರು.
ಆಸ್ಪತ್ರೆ ಯಾವ ಪುರುಷಾರ್ಥಕ್ಕೆ: 13 ವರ್ಷದ ಬ್ರಿಮ್ಸ್‌ಗೆ ಈವರೆಗೆ ಆಡಾಳಿತಾಧಿಕಾರಿ ಇಲ್ಲ ಎಂದರೆ ಹೇಗೆ? ಒಟ್ಟು ಮಂಜೂರಾದ 1085 ಹುದ್ದೆಗಳ ಪೈಕಿ ಇದುವರೆಗೆ 389 ಹುದ್ದೆಗಳು ಭರ್ತಿಯೇ ಆಗಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, ಜನರಿಗೆ ಅನುಕೂಲವಾಗುತ್ತಿಲ್ಲ ಎಂದರೆ ನೂರಾರು ಕೋಟಿ ಹಣ ವ್ಯಯಿಸಿ ನಿರ್ಮಿಸಿದ ಆಸ್ಪತ್ರೆ ಯಾವ ಪುರುಷಾರ್ಥಕ್ಕೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ರಿಮ್ಸ್‌ನಲ್ಲಿ ಇದುವರೆಗೆ ಖಾಲಿ ಇರುವ 5 ಪ್ರೋಪೆಸರ್, 3 ಅಸೋಸಿಯೇಟ್ ಪ್ರೋಪೆಸರ್ ಮತ್ತು 8 ಅಸಿಸ್ಟಂಟ್ ಗಳ ಹುದ್ದೆಗಳ ನೇಮಕಾತಿ ನಡೆಯುವ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು ಎಂದು ನಿರ್ದೇಶನ ನೀಡಿದರು. ಬ್ರಿಮ್ಸ್‌ನಲ್ಲಿ 71 ಗ್ರೂಪ್ ಎ, 1 ಗ್ರೂಪ್ ಬಿ, 135 ಗ್ರೂಪ್ ಸಿ, 82 ಗ್ರೂಪ್ ಡಿ. ಸೇರಿ 289 ಹುದ್ದೆಗಳು ಹಾಗೂ ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಗ್ರೂಪ್ ಎ 12, ಗ್ರೂಪ್ ಬಿ 2, ಗ್ರೂಪ್ ಸಿ. 71 ಮತ್ತು ಗ್ರೂಪ್ ಡಿ. 15 ಸೇರಿ 100 ಹುದ್ದೆಗಳು ಸೇರಿ ಒಟ್ಟು 389 ಹುದ್ದೆಗಳು ಭರ್ತಿಯಾಗುವುದು ಬಾಕಿ ಇದೆ ಎಂದು ಬ್ರಿಮ್ಸ್ ನಿರ್ದೇಶಕರು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಮಾಹಿತಿ ನೀಡಿದರು.
ಸಂಸದ ಭಗವಂತ ಖೂಬಾ ಮಾತನಾಡಿ, ಹಲವಾರು ಭಾರಿ ಆಸ್ಪತ್ರೆಗೆ ಭೇಟಿ ನೀಡಿದರೂ ಸುಧಾರಣೆಯಾಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿ ಅಸಮಾಧಾನ ತೋರಿದರು. ಆಸ್ಪತ್ರೆಗೆ ನೂರಾರು ಕೋಟಿ ರೂ ಖರ್ಚು ಮಾಡಿದ್ದರೂ ಜನತೆಗೆ ಇಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಸೊಲ್ಲಾಪುರ, ಹೈದ್ರಾಬಾದ್ ಹೋಗುವಂತಾಗಿದೆ ಎಂದು ಶಾಸಕ ರಹೀಂ ಖಾನ್ ತಿಳಿಸಿದರು.
ಬ್ರಿಮ್ಸ್ ಸುಧಾರಣೆ ವಿಷಯ ಹತ್ತಾರು ವರ್ಷಗಳ ಕಾಲ ಸಭೆಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಸುಧಾರಣೆಯಾಗಿಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಇಲ್ಲಿ ಸರಿಯಾದ ಆಡಳಿತ ವ್ಯವಸ್ಥೆಯಿಲ್ಲ. ಇಲ್ಲಿನ ಸಮಸ್ಯೆ ನಿಮ್ಮಿಂದಾದರೂ ತೊಲಗಲಿ ಎಂದು ಶಾಸಕ ಬಿ.ನಾರಾಯಣರಾವ್ ಅವರು ಧನಿಗೂಡಿಸಿದರು. ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಡಿಸಿ ಆರ್. ರಾಮಚಂದ್ರನ್ ಇದ್ದರು.