ಬೀದರ: ಕೊರೊನಾ ಪ್ರಕೃತಿ ವಿಕೋಪವಲ್ಲ, ಅದೊಂದು ಸಾಮಾಜಿಕ ಪಿಡುಗು. ಆದಾಗ್ಯೂ ರಾಜ್ಯದಲ್ಲಿ ಲಾಕ್‌ಡೌನ್‌ದಿಂದಾಗಿ ರೈತರು ಅನುಭವಿಸುತ್ತಿರುವ ನಷ್ಟ ಭರಿಸಿಕೊಡುವ ದಿಸೆಯಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ದಿಂದ ರೈತರಿಗೆ ನಷ್ಟವಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ಅಂತರ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಗಡಿಗಳನ್ನು ತೆರೆದು ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗ್ರಿ ಪಾಸ್ ಕೊಟ್ಟಿದ್ದು, ರೈತರಿಗೆ ತೊಂದರೆಯಾಗಲ್ಲ. ಅವರ ಬೇಳೆ ಕಾಳುಗಳ ಮಾರಾಟ-ಸಾಗಾಟಕ್ಕೆ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಮುಂಗಾರು ಬಿತ್ತನೆಗೆ ರೈತರ ಅಗತ್ಯತೆಗಳ ಕುರಿತಂತೆ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಮಾ. 4ರಂದೇ ಸರ್ಕಾರದ ಆದೇಶವಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ, ಔಷಧ ಪೂರೈಸಲು ಸರ್ಕಾರ ಸಿದ್ಧವಿದೆ ಎಂದರು.
ಶಾಸಕ ಬಂಡೆಪ್ಪ ಖಾಶೆಂಪೂರ್ ಮಾತನಾಡಿ, ರೈತರಿಗೆ ತಮ್ಮ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಯಾವುದೇ ತೊಂದರೆಯಾಗುತ್ತಿಲ್ಲ. ಆದರೆ, ಅವರು ಮಾರಾಟ ಯಾರಿಗೆ ಮಾಡಬೇಕು?. ಎಪಿಎಂಸಿ ಸಂಪೂರ್ಣ ಬಂದ್ ಇದೆ. ಕೆಲವು ಗಂಟೆಗಳು ಮಾತ್ರ ತೆರೆದಿದ್ದರೆ ಹೇಗೆ, ಸರ್ಕಾರ ಬೆಂಬಲ ಬೆಲೆ ನೀಡಿ ರೈತ ಖರೀದಿ ಕೇಂದ್ರಗಳಲ್ಲಿ ಉತ್ಪನ್ನ ಖರೀದಿ ಮಾಡಿ ಇದನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯಾರಂಭಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ| ಮಹಾದೇವ ಮಾತನಾಡಿ, ರೈತರಿಗೆ ಸಾಗಾಣಿಕೆ ಸಮಸ್ಯೆಯಾಗದಂತೆ ಕ್ರಮ ವಹಿಸಿದ್ದೇವೆ. ರೈತರು ಎಪಿಎಂಸಿಗಳಿಗೆ ಬೇಳೆ ಕಾಳು ತಂದರೂ ಅವರನ್ನು ತಡೆಯುವಂತಿಲ್ಲ. ಲಾರಿಯಲ್ಲಿ ತಂದರೂ ಅದನ್ನು ತಡೆಯುವಂತಿಲ್ಲ ಎಂದು ಪೊಲೀಸರಿಗೂ ಸೂಕ್ತ ನಿರ್ದೇಶನ ನೀಡಲಾಗಿದೆ
ಎಂದರು. ಸಭೆಯಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೇರಿದಂತೆ ಜಿಲ್ಲೆಯ ಶಾಸಕರು, ಅ ಧಿಕಾರಿಗಳು, ರೈತ ಸಂಘದ ಮುಖಂಡರು ಇದ್ದರು.