ಬೀದರ: ರೈತರಿಗೆ ಬೆನ್ನೆಲುಬಾಗಿ ಕೃಷಿ ವಿಜ್ಞಾನ ಕೇಂದ್ರ ಕಾರ್ಯನಿರ್ವಹಿಸಿದ್ದು, ಇಲ್ಲಿನ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ರೈತರಿಗೆ ಸಲಹೆ ಮಾಡಿದರು. ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಇ-ಸ್ಯಾಪ್: ಬೆಳೆ ಸಂರಕ್ಷಣೆಗೆ ಮಾಹಿತಿ ತಂತ್ರಜ್ಞಾನ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬೆಳವಣಿಗೆಯಲ್ಲಿ ರೈತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವರು ಕೃಷಿ ವಿಜ್ಞಾನ ಕೇಂದ್ರದಲ್ಲಿನ ಕೃಷಿ ವಸ್ತು ಪ್ರದರ್ಶನ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಕೇಂದ್ರದಲ್ಲಿನ ತಂತ್ರಜ್ಞಾನದಿಂದ ತಮಗೆ ಸಾಕಷ್ಟು ಅನುಕೂಲವಾಯಿತು ಎಂದು ಇದೆ ವೇಳೆ ಸಚಿವರಿಗೆ ಬೀದರನ ರೈತರಾದ ಗುರುಲಿಂಗಪ್ಪ ಮೇಲದೊಡ್ಡಿ, ಕಾಸಿಲಿಂಗ ಅಗ್ರಹಾರ, ನವನಾಥ ವರ್ದಾ ತಿಳಿಸಿದರು. ಸಚಿವರು ಇದೇ ವೇಳೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಲಸಿನ ಗಿಡವೊಂದನ್ನು ನೆಟ್ಟರು. ಬಳಿಕ ಅಲ್ಲಿನ ಸಾವಯವ ಕೃಷಿ ಘಟಕ, ಎರೆಹುಳು ಘಟಕ, ಜೀವಾಮೃತ, ಬೀಜಾಮೃತ ಘಟಕಗಳನ್ನು ಸಚಿವರು ವೀಕ್ಷಣೆ ನಡೆಸಿದರು.
ಕೆವಿಕೆಯಿಂದ ರೈತರಿಗೆ ಇರುವ ಅನುಕೂಲತೆಗಳ ಬಗ್ಗೆ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿ ಡಾ| ಸುನೀಲಕುಮಾರ ಎನ್.ಎಂ. ಅವರು ಸಚಿವರಿಗೆ ಮಾಹಿತಿ ನೀಡಿದರು. ರಾಯಚೂರಿನ ಕೃಷಿ ವಿವಿ ಕುಲಪತಿ ಡಾ| ಕೆ.ಎಂ.ಕಟ್ಟಿಮನಿ, ನಿರ್ದೇಶಕ ಡಾ| ಡಿ.ಎಂ.ಚಂದ್ರಗಿ, ವಿಸ್ತರಣಾ ನಿರ್ದೇಶಕ ಡಾ| ಬಿ.ಕೆ.ದೇಸಾಯಿ, ಕೃಷಿ ಜಂಟಿ ನಿರ್ದೇಶಕ ತಾರಾಮಣಿ ಜಿ.ಎಚ್. ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಬೀದರನಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ಗಡಿ ಭಾಗ ಬೀದರನಲ್ಲಿ ಕೃಷಿ ಪದವಿ ಕಾಲೇಜು ಆರಂಭದ ಅವಶ್ಯಕತೆ ಇದ್ದು, ಬರುವ ದಿನಗಳಲ್ಲಿ ಕಾಲೇಜು
ಸ್ಥಾಪನೆಗೆ ಸರ್ಕಾರ ಕ್ರಮ ವಹಿಸಲಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದರು. ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರನಲ್ಲಿ ಕೃಷಿ ಕಾಲೇಜು ಆರಂಭ ಕುರಿತಂತೆ ಜಿಲ್ಲೆಯ ಜನಪ್ರತಿನಿಧಿ ಗಳು ನನ್ನೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡಿರುವ ಬೀದರ ಜಿಲ್ಲೆಯ ರೈತರ ಪರಿಹಾರ ಧನಕ್ಕಾಗಿ ಗುರುವಾರ 2.76 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜತೆಗೆ ಕಿಸಾನ್ ಸಮ್ಮಾನ ಯೋಜನೆಯಡಿ 25.60 ಲಕ್ಷ ರೂ. ಹಣ ಸಹ ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಪ್ರಶ್ನೆಯೊಂದಿಗೆ ಉತ್ತರಿಸಿದ ಸಚಿವ ಬಿ.ಸಿ ಪಾಟೀಲ, ಪ್ರಗತಿ ಪರ ರೈತರು ಯಾವ ರೀತಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಇಳುವರಿ ಹೆಚ್ಚಳಕ್ಕೆ ಅನುಸರಿಸುತ್ತಿರುವ ಕ್ರಮಗಳ
ಅಧ್ಯಯನ ಮಾಡಲು ಕೃಷಿ ಇಲಾಖೆಯಿಂದ “ರೈತರೊಂದಿಗೊಂದು ದಿನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಫೆ.20ರಂದು ಜಿಲ್ಲೆಯಿಂದ ಆರಂಭಿಸಲಾಗುತ್ತಿದೆ ಎಂದು ಹೇಳಿದರು.