ಬೀದರ: ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಣ ಮತ್ತು ಸಂತ್ರಸ್ತರ ಸಂಕಷ್ಟಗಳನ್ನು ದೂರ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದಿರುವುದು ಮತ್ತು ಅಮಾನವೀಯತೆ ತೀರ್ಮಾನಗಳೇ ಇಂದು ಕೋವಿಡ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿಗೂ ನಮ್ಮಲ್ಲಿ ಕೋವಿಡ್ ಪರೀಕ್ಷಾ ಕಿಟ್‌ಗಳ ಕೊರತೆ ಇದೆ. ನಾಲ್ಕೈದು ಸಾವಿರ ಪರೀಕ್ಷಾ ವರದಿಗಳು ಬಾಕಿ ಉಳಿಯುತ್ತಿವೆ. ಕ್ವಾರಂಟೈನ್ ವಿಷಯದಲ್ಲಿ ದೂರದೃಷ್ಟಿಯೇ ಇಲ್ಲ. ಇನ್ನೊಂದೆಡೆ ಯಾವುದೇ ಸಿದ್ಧತೆ ಇಲ್ಲದೇ ಲಾಕ್‌ಡೌನ್ ಘೋಷಿಸಿದ್ದರಿಂದ ಕಾರ್ಮಿಕರು, ನಿರ್ಗತಿಕರು ಸಂಕಷ್ಟ ಎದುರಿಸುವಂತಾಗಿದೆ. ವಲಸೆ ಕಾರ್ಮಿಕರು ಒಪ್ಪಿತ್ತಿನ ಊಟ ಇಲ್ಲದೇ ನಡೆದುಕೊಂಡೇ ತಮ್ಮೂರು ಸೇರುತ್ತಿದ್ದಾರೆ. ಕೆಲವರು ರಸ್ತೆ ಮೇಲೆ ಸಾವನ್ನಪ್ಪುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಇದೆಂಥಾ ಸ್ವಾವಲಂಬಿ, ಆತ್ಮನಿರ್ಭರ ಭಾರತ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ದೇಶದ ಜನರಿಗೆ ಮರಳು ಮಾಡುವ ಬೋಗಸ್ ಪ್ಯಾಕೇಜ್ ಆಗಿದ್ದು, ಇದರಿಂದ ಯಾರಿಗೂ ಅನುಕೂಲ ಆಗಲ್ಲ. ಸಾಲ ಕೊಡೊವುದಕ್ಕೆ ಪ್ಯಾಕೇಜ್ ಎನ್ನಬೇಕೆ ? ಕುಸಿಯುತ್ತಿರುವ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿರೋಧ ಪಕ್ಷವಾಗಿ ಕಾಂಗ್ರೆಸ್ ನೀಡಿದ್ದ ಸಲಹೆ, ಎಚ್ಚರಿಕೆಗಳನ್ನು ಸರ್ಕಾರ ಕಡೆಗಣಿಸುತ್ತ ಬಂದಿದೆ. ಸರ್ಕಾರ ಪ್ಯಾಕೇಜ್ ನೀಡುವ ಬದಲು ಆರ್ಥಿಕ ತಜ್ಞರ ಸಲಹೆಯಂತೆ ಆದಾಯ ತೆರಿಗೆ ವ್ಯಾಪ್ತಿಗೆ ಬರದ 15-20 ಕೋಟಿ ಜನರ ಖಾತೆಗೆ ನೇರವಾಗಿ 10 ಸಾವಿರ ರೂ. ಪರಿಹಾರ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 6 ವರ್ಷ ಪೂರ್ಣಗೊಂಡಿದೆ. ಆದರೆ ಸಾಧನೆ ಮಾತ್ರ ಶೂನ್ಯವಾಗಿದೆ. ಮೋದಿ ಹೇಳಿದಂಥ ಒಳ್ಳೆಯ ದಿನಗಳು ಬರಲೇ ಇಲ್ಲ. ಜನರ ಬದುಕಿನಲ್ಲಿ ಬದಲಾವಣೆ, ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಕಾಣಿಸಲೇ ಇಲ್ಲ. ಭಾರತ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಹೋಗಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಗಳಿಂದ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್‌ಗೆ ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.ಶಾಸಕರಾದ ರಾಜಶೇಖರ ಪಾಟೀಲ, ಡಾ| ಚಂದ್ರಶೇಖರ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಆನಂದ ದೇವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಭಾಲ್ಕಿ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಜಿಲ್ಲಾಧಿಕಾರಿಗಳು ಶೋಕಾಸ್ ನೋಟಿಸ್
ಹೊರಡಿಸುವ ಮೂಲಕ ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹಕ್ಕು ಚ್ಯುತಿ ಮಂಡಿಸಲು ಸ್ಪೀಕರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದೇನೆ.
ಈಶ್ವರ ಖಂಡ್ರೆ,
ಶಾಸಕರು, ಭಾಲ್ಕಿ