ಬೀದರ: ಗುಲ್ಬರ್ಗ ವಿದ್ಯುತ್ಛಕ್ತಿ ಸರಬರಾಜು ಕಂಪನಿ 24×7 ಅಡಚಣೆ ರಹಿತ ವಿದ್ಯುತ್ ನೀಡಲು ಬದ್ಧವಾಗಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ- ರಾಜ್ಯ ಸರ್ಕಾರ ಕೆಲವು ನಿರ್ಬಂಧ ಜಾರಿಗೊಳಿಸಿವೆ. ಇದರಿಂದ ಏಪ್ರಿಲ್ ನಲ್ಲಿ ಮಾಪಕದ ರೀಡಿಂಗ್ ತೆಗೆದುಕೊಳ್ಳಲಾಗಿಲ್ಲ. ಹಿಂದಿನ ಮೂರು ತಿಂಗಳ ಬಿಲ್ ಆಧರಿಸಿ ಸರಾಸರಿ ಬಿಲ್ ನೀಡಲಾಗಿದೆ. ಮೇ ತಿಂಗಳಲ್ಲಿ ಮಾಪಕದಲ್ಲಿನ ವಾಸ್ತವಿಕ ರೀಡಿಂಗ್ ಗಣನೆಗೆ ತೆಗೆದುಕೊಂಡು ಏಪ್ರಿಲ್‌ನ ಸರಾಸರಿ ಬಿಲ್ಲಿನ ಪಾವತಿ ಮೊತ್ತ ಕಡಿತಗೊಳಿಸಿ ವಾಸ್ತವಿಕ ಬಿಲ್ ಹಾಗೂ ಸರಾಸರಿ ಬಿಲ್ಲಿನ ವ್ಯತ್ಯಾಸ ಸರಿಪಡಿಸಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಮಾರ್ಚ್ ಮತ್ತು ಏಪ್ರಿಲ್ ವಿದ್ಯುತ್ ಬಳಕೆ ಎರಡು ತಿಂಗಳ ಬಿಲ್ ಒಟ್ಟಿಗೆ ನೀಡಿದ್ದು, ಲಾಕ್ ಡೌನ್ ಪರಿಣಾಮ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗಿರುವುದು ಸಾಮಾನ್ಯವಾಗಿ ವಿದ್ಯುತ್ ಬಳಕೆಯೂ ಹೆಚ್ಚಾಗಿರುತ್ತದೆ. ಜೊತೆಗೆ ಬಳಕೆ ಹೆಚ್ಚಾದಂತೆ ಹೆಚ್ಚಿನ ಸ್ಲ್ಯಾಬ್ ದರಗಳು ಅನ್ವಯಿಸುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿರುತ್ತದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಟ್ಯಾರೀಫ್ ಆದೇಶದ ಅನುಸಾರ ಸಾಮಾನ್ಯವಾಗಿ ಒಂದು ವಿದ್ಯುತ್ ಬಿಲ್‌ನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಬಳಕೆ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳು ಸೇರಿರುತ್ತವೆ. ಈಗ ಎರಡು ತಿಂಗಳು ಬಳಕೆ ಬಿಲ್ ಒಟ್ಟಿಗೆ ನೀಡಿದ್ದರೂ, ಗ್ರಾಹಕರಿಗೆ ಬಳಕೆ ಮತ್ತು ಸ್ಲ್ಯಾಬ್ ದರಗಳನ್ನು ಮಾಸಿಕ ಬಿಲ್‌ಗೆ ಅನ್ವಯಿಸುವಂತೆ ಕರಾರುವಕ್ಕಾಗಿ ಹಾಗೂ ಯಾವುದೇ ಹೆಚ್ಚುವರಿಯಾಗದಂತೆ ಎರಡು ತಿಂಗಳಿಗೂ ಸಮಾನವಾಗಿ ಯುನಿಟ್ ಬಳಕೆ, ಸ್ಲ್ಯಾಬ್‌ಗಳನ್ನು ದುಪ್ಪಟ್ಟುಗೊಳಿಸಿ ಕನಿಷ್ಠ ಸ್ಲ್ಯಾಬ್ ನಿಂದ ಅನ್ವಯಿಸುವಂತೆ ಬಿಲ್‌ನಲ್ಲಿ ತೋರಿಸಲಾಗಿದೆ.
ಗ್ರಾಹಕರು ವಿದ್ಯುತ್ ಶುಲ್ಕದ ಮೊದಲನೇ ಸಾಲಿನಲ್ಲಿ 30 ಯುನಿಟ್ ಬದಲಾಗಿ 60 ಯುನಿಟ್‌ಗಳಿಗೆ, ಎರಡನೇ ಸಾಲಿನಲ್ಲಿ 70 ಯುನಿಟ್ ಬದಲಾಗಿ 140 ಯುನಿಟ್ ಗಳಿಗೆ, ಮೂರನೇ ಸಾಲಿನಲ್ಲಿ 100 ಯುನಿಟ್ ಬದಲಾಗಿ 200 ಯುನಿಟ್‌ಗಳು ಇತ್ಯಾದಿಯಾಗಿ ಲೆಕ್ಕಿಸಿರುವುದನ್ನು ಗಮನಿಸಲು ಕೋರಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ