ಬೀದರ: ತೋಟಗಾರಿಕೆ ಕೃಷಿ ಲಾಭದಾಯಕವಲ್ಲ ಎನಿಸುವ ಈ ದಿನಗಳಲ್ಲಿ ಸತತ ಬರ, ಅಂತರ್ಜಲ ಕುಸಿತ, ವಿದ್ಯುತ್ ಅಭಾವ, ಆಳುಗಳ ಸಮಸ್ಯೆಗಳೆಲ್ಲವನ್ನು ಎದುರಿಸಿ ಮೆಟ್ಟಿ ನಿಂತು, ಭಾಲ್ಕಿ ತಾಲೂಕಿನ ಧನ್ನೂರನ ನಿವೃತ್ತ ಮುಖ್ಯಗುರು ರಾಮಚಂದ್ರ ಕರ್ಮವೀರ ತೋಟಗಾರಿಕೆ ಕೃಷಿಯಲ್ಲಿ ವಿವಿಧ ಬೆಳೆ ಬೆಳೆದು ನಿರಂತರ ಆದಾಯ ಗಳಿಸಿ ಇತರ ರೈತರಿಗೂ ಮಾದರಿಯಾಗಿದ್ದಾರೆ.
ವಿದ್ಯುತ್ ಸಮಸ್ಯೆಯೇ ಇಲ್ಲ: ತಮ್ಮ ಮೂರು ಎಕರೆ ಜಮೀನಿನಲ್ಲಿ ರೆಡ್ ಲೆಡಿ (ಥೈವಾನ್ -786) ತಳಿ ಪಪ್ಪಾಯಿ, ಅರ್ಧ ಎಕರೆಯಲ್ಲಿ ಚಂಡು, ಲಿಲ್ಲಿ ಹೂ ಬೆಳೆದಿದ್ದು, ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹನಿ ನೀರಾವರಿ ಅಳವಡಿಸಿಕೊಂಡು ತೋಟಗಾರಿಕೆ ಇಲಾಖೆಯಿಂದ ಧನಸಹಾಯ ಪಡೆದಿದ್ದಾರೆ.
20 ಪ್ಲೇಟ್‌ಗಳ ಸೋಲಾರ್ ಪದ್ಧತಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಅಳವಡಿಸಿಕೊಂಡು ಕೊಳವೆ ಬಾವಿ ಮತ್ತು ಫಾರ್ಮ್ ಹೌಸ್‌ಗೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಇದರಿಂದ ವಿದ್ಯುತ್ ಸಮಸ್ಯೆಯೇ ಉದ್ಭವಿಸಿಲ್ಲವಂತೆ.
ಒಂದೇ ಆಳಿನಿಂದ ಕೆಲಸ: ಸ್ವತಃ ಜೀವಾಮೃತ ತಯಾರಿಸಿ ಪ್ರತಿ ಗಿಡದ ಬುಡದ ಸುತ್ತಲೂ ಹಾಕುತ್ತಾರೆ. ಹೀಗಾಗಿ ಕೀಟ-ರೋಗಬಾಧೆ ಬಂದಿಲ್ಲ. ಕಪ್ಪು ಮಣ್ಣಿನಲ್ಲಿ ಬೆಳೆಗಳು ಹುಲುಸಾಗಿ ಬೆಳೆದಿವೆ. ಇದಕ್ಕೂ ಮುನ್ನ ಒಣ ಬೇಸಾಯದಲ್ಲಿ ಜೋಳ, ತೊಗರಿ, ಉದ್ದು, ಹೆಸರು ಬೆಳೆದು, ಸರಿಯಾಗಿ ಮಳೆಯಾಗದೇ ಫಸಲು ಕೈಗೆ ಬರದೇ ನಿರಾಶರಾಗಿದ್ದರು. ನಂತರ ಹೆಚ್ಚಿನ ಆದಾಯ ಬರುವುದು ತೋಟಗಾರಿಕೆ ಬೆಳೆಗಳಿಂದಲೇ ಎಂದರಿತು ಬೋರ್‌ವೆಲ್ ಹಾಕಿಸಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.
ಡಿ.ಸಿ.ಸಿ ಬ್ಯಾಂಕಿನಿಂದ 35,000 ರೂ. ಸಾಲ ಪಡೆದು ಜೊತೆಗೆ ಪಿಂಚಣಿ ಹಣದಿಂದ ಕೃಷಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಒಂದೇ ಆಳಿನ ಜೊತೆಗೆ ಅವರು ತೋಟದ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಉತ್ತಮ ಆದಾಯ: ಸದ್ಯ ಪಪ್ಪಾಯಿ ಗಿಡಗಳು ಕಾಯಿ ಕೊಡುತ್ತಿವೆ. ಅರ್ಧ ಎಕರೆ ಚಂಡು ಹೂ ಬೆಳೆಯಿಂದ ಆಗಲೇ 30,000 ರೂ. ಬಂದಿದೆ. ಇನ್ನೂ ಹೂ ಬರುತ್ತಿದ್ದು, ಪಪ್ಪಾಯಿ ಕಾಯಿಗಳನ್ನು ದೆಹಲಿ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಮೂರು ಎಕರೆಯಲ್ಲಿ ವರ್ಷಕ್ಕೆ 50 ಟನ್ ಇಳುವರಿ ಬರಬಹುದೆಂದು ಅಂದಾಜಿಸಲಾಗಿದೆ. ದರ ಸರಾಸರಿ 18 ರೂ. ಸಿಕ್ಕಿದೆ. ಇದರಿಂದ ಇಲ್ಲಿಯವರೆಗೆ 22 ಟನ್‌ಗೆ 4 ಲಕ್ಷ ರೂ. ಗಳಿಕೆಯಾಗಿದ್ದು, ಇನ್ನೂ ಕಾಯಿಗಳು ಬರುತ್ತಿವೆ. ಸರಿಯಾಗಿ ನಿರ್ವಹಣೆ ಮಾಡಿದರೆ ಮೂರು ವರ್ಷದವರೆಗೆ ಬೆಳೆ ತೆಗೆಯಬಹುದು ಎನ್ನುತ್ತಾರೆ ರಾಮಚಂದ್ರ.
ಸಸಿ ಬೆಳೆಸುವ ಹವ್ಯಾಸ: ರಾಮಚಂದ್ರ ಅವರಿಗೆ ಹೊಲದಲ್ಲಿ ತೋಟಗಾರಿಕೆ ಮಾಡುವುದಷ್ಟೇ ಅಲ್ಲ, ಮನೆಯಲ್ಲಿಯೂ ಅಲಂಕಾರಿಕ ಗಾರ್ಡನ್, ಕರಿಬೇವು ಮತ್ತು ಔಷಧೀಯ ಸಸಿಗಳನ್ನು ಬೆಳೆಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಶಿಕ್ಷಕರಾಗಿದ್ದಾಗ ಯಾವುದೇ ಶಾಲೆಗೆ ವರ್ಗವಾಗಿ ಹೋದರೂ ಅಲ್ಲೊಂದಿಷ್ಟು ಗಿಡ ಮರಗಳನ್ನು ಮಕ್ಕಳ ಕಡೆಯಿಂದ ಹಚ್ಚಿಸಿ, ಬೆಳೆಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರ ಕರ್ಮವೀರ ಮೊ.ಸಂ. 9449280226ಕ್ಕೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ತಿಳಿಸಿದ್ದಾರೆ.