ಬೀದರ: ಗಡಿ ನಾಡು ಬೀದರನಲ್ಲಿ ಮಹಾಮಾರಿ ಕೋವಿಡ್ ಸಾವಿನ ರಣಕೇಕೆ ಮುಂದುವರಿದಿದ್ದು, ರವಿವಾರ ಮತ್ತಿಬ್ಬರು ಸೋಂಕಿತರನ್ನು ಬಲಿ ಪಡೆದಿದೆ. ಇದರೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 15ಕ್ಕೇರಿಕೆಯಾಗಿದೆ. ಇನ್ನೊಂದೆಡೆ 13 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಜನರ ಜೀವ ಹಿಂಡುತ್ತಿರುವ ಕೋವಿಡ್ ಗೆ ಸತತ ಆರು ದಿನದಲ್ಲಿ 9 ಜನರು ಮೃತಪಟ್ಟಿದ್ದಾರೆ. ಮಂಗಳವಾರದಿಂದ ಸತತ ಮೂರು ದಿನ ತಲಾ ಒಬ್ಬರು ಸೋಂಕಿತರು ಬಲಿ ಆಗಿದ್ದರೆ, ನಂತರ ಎರಡು ದಿನ ತಲಾ ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಈಗ ಮತ್ತೆ ರವಿವಾರ ಇಬ್ಬರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವೈದ್ಯರ ಪ್ರಕಾರ ಕಿಡ್ನಿ, ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳುಳ್ಳ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಬೀದರ ನಗರದ ಗವಾನ್ ಚೌಕ್‌ನ 70 ವರ್ಷದ ವ್ಯಕ್ತಿ (ಪಿ-9149) ಬಿಪಿ, ಜ್ವರದ ಸಮಸ್ಯೆ ಹಿನ್ನೆಲೆಯಲ್ಲಿ ಜೂ. 18ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಅದೇ ದಿನ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವದ ವರದಿ ರವಿವಾರ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ.
ತಾಲೂಕಿನ ಮಾಳೆಗಾಂವ ಗ್ರಾಮದ 46 ವರ್ಷದ ವ್ಯಕ್ತಿ ಜೂ. 17ರಂದು ಸರಾಯಿ ನಶೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರನೆ ದಿನ ಸಾವನ್ನಪ್ಪಿದ್ದರು. ಅವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿದೆ. ಇನ್ನು ರವಿವಾರ ಜಿಲ್ಲೆಯಲ್ಲಿ 13 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 4 ಜನರ ಸಂಪರ್ಕವೇ ಪತ್ತೆಯಾಗಿಲ್ಲ. ಇನ್ನು ಮೂವರಿಗೆ ಪಿ. 7524 ರೋಗಿಗಳ ಸಂಪರ್ಕದಿಂದ ಸೋಂಕು ವಕ್ಕರಿಸಿದೆ.
ಸೋಂಕಿತರಲ್ಲಿ 7 ಜನ ಬೀದರ ನಗರದವರೇ ಆಗಿದ್ದಾರೆ. ಸ್ಥಳೀಯ ಆಸ್ಪತ್ರೆಯೊಂದರ 4 ಸಿಬ್ಬಂದಿಗಳು, ಶಿವನಗರ, ಮುಲ್ತಾನಿ ಕಾಲೋನಿ, ಬಸವ ನಗರ, ಶಿವನಗರದ ತಲಾ ಒಂದು, ಜನವಾಡಾ ಮತ್ತು ಸುಲ್ತಾನಪುರ ಗ್ರಾಮದ ತಲಾ ಒಂದು ಪ್ರಕರಣ, ಭಾಲ್ಕಿ ತಾಲೂಕಿನ ನಾಗರಾಳ ಮತ್ತು ಕಮಲನಗರದಲ್ಲಿ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿವೆ. ರವಿವಾರ 58 ಸೋಂಕಿತರು ಡಿಸಾcರ್ಜ್ ಆಗಿರುವುದು ಕೊಂಚ ಸಮಾಧಾನ ತಂದಿದ್ದರೆ ಈವರೆಗೆ ಪಾಸಿಟಿವ್‌ಗಳ ಸಂಖ್ಯೆ 497ಕ್ಕೆ ತಲುಪಿದೆ. ಒಟ್ಟು 324 ಮಂದಿ ಡಿಸಾcರ್ಜ್ ಆಗಿದ್ದು, ಇನ್ನೂ 158 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.