Advertisement

ಕಂಕಣ ಸೂರ್ಯಗ್ರಹಣ ನೈಸರ್ಗಿಕ ವಿದ್ಯಮಾನ: ಗುಂಡಪ್ಪ

04:12 PM Dec 25, 2019 | Naveen |

ಬೀದರ: ಕಂಕಣ ಸೂರ್ಯಗ್ರಹಣ ಒಂದು ನೈಸರ್ಗಿಕ ವಿದ್ಯಮಾನವಾಗಿದ್ದು, ನಿಸರ್ಗದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಭೂಮಿ ಹಾಗೂ ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ ಎಂದು ವಿಜ್ಞಾನ ವಿಷಯ ಪರಿವೀಕ್ಷಕ ಗುಂಡಪ್ಪ ಹುಡಗೆ ಹೇಳಿದರು.

Advertisement

ನಗರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ರಾಜ್ಯ ವಿಜ್ಞಾನ ತಂತ್ರಜ್ಞಾನ ಇಲಾಖೆ, ಕರಾವಿಪ ಜಿಲ್ಲಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಯಲ್ಲಿ ನಡೆದ “ಸೂರ್ಯೋತ್ಸವ ಕಂಕಣ ಸೂರ್ಯಗ್ರಹಣ’ ಕುರಿತು ಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೂರ್ಯಗ್ರಹಣದಲ್ಲಿ ಮೂರು ವಿಧಗಳಿರುತ್ತವೆ. ಪೂರ್ಣ, ಪಾರ್ಶ್ವ ಹಾಗೂ ಕಂಕಣ ಸೂರ್ಯಗ್ರಹಣ. ಅಂದರೆ ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡುವುದಿಲ್ಲ. ಹೊಳೆಯುವ ಬಂಗಾರದ ಬಳೆಯ ರೀತಿ ಸೂರ್ಯ ಗೋಚರಿಸುತ್ತಾನೆ. ಬೆಳಗ್ಗೆ 8:05 ನಿಮಿಷಕ್ಕೆ ಗ್ರಹಣ ಆರಂಭವಾಗಿ 9:26 ನಿಮಿಷಕ್ಕೆ ಗ್ರಹಣದ ಮಧ್ಯಕಾಲ ಇರಲಿದೆ. ಈ ಕಾಲದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ. ಬೆಳಗ್ಗೆ ಸುಮಾರು 11:06 ನಿಮಿಷಕ್ಕೆ ಗ್ರಹಣ ಅಂತ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಎಸ್‌. ಮನೋಹರ ಮಾತನಾಡಿ, ಮೂಢನಂಬಿಕೆ ಹೋಗಲಾಡಿಸಲು ಜನರಲ್ಲಿ ಸೂರ್ಯಗ್ರಹಣದ ಬಗ್ಗೆ ಜಾಗೃತಿ ಮೂಡಿಸಬೇಕು. ಹೆಚ್ಚಾಗಿ ವೈದ್ಯರು, ಅಭಿಯಂತರರು, ವಕೀಲರು, ಶಿಕ್ಷಕ-ಶಿಕ್ಷಕಿಯರು ಹೆಚ್ಚು ಮೂಢನಂಬಿಕೆಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ಮೂಢನಂಬಿಕೆಯನ್ನು ಹೋಗಲಾಡಿಸಲು ಶಿಕ್ಷಕರು ಮೊದಲು ತಮ್ಮ ಭಾವನೆಯಲ್ಲಿ ಬದಲಾವಣೆ ಮಾಡಿಕೊಂಡು ನಂತರ ಬೋಧನೆಯಲ್ಲಿ ಬದಲಾವಣೆ ಮಾಡಿ ಮಕ್ಕಳಲ್ಲಿ ಇದರ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.

ಶಾಮಕಾಂತ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿ, ಸೂರ್ಯನನ್ನು ದೇವರು ಎಂದು ನಮ್ಮ ಜನರು ನಂಬಿದ್ದಾರೆ. ಇಡೀ ಬ್ರಹ್ಮಾಂಡಕ್ಕೆ ಬೆಳಕು ಕೊಡುತ್ತಾನೆಂದು ತಿಳಿದಿದ್ದಾರೆ. ಜನರಲ್ಲಿ ಹಾಗೂ ಮಕ್ಕಳಲ್ಲಿ ಸೂರ್ಯಗ್ರಹಣದ ಬಗ್ಗೆ ನಾವು ಜಾಗೃತಿ ಮೂಡಿಸಿದಾಗ ಮಾತ್ರ ಜನರಲ್ಲಿರುವ ಅಂಧವಿಶ್ವಾಸ ಹೋಗಲಾಡಿಸಲು ಸಾಧ್ಯ ಎಂದರು. ಇಂಥದ್ದೊಂದು ವಿದ್ಯಮಾನ ಭಾರತದಲ್ಲಿ 1944ರ ಜುಲೈ 24 ರಂದು ಸಂಭವಿಸಿತ್ತು. ಮುಂದೆ ಕಾಣಬೇಕಾದರೆ 2064ರ ವರೆಗೂ ಕಾಯಬೇಕು ಎಂದು ತಿಳಿಸಿದರು.

Advertisement

ಕರಾವಿಪ ಜಿಲ್ಲಾ ಕಾರ್ಯದರ್ಶಿ ಕಲಾಲ ದೇವಿಪ್ರಸಾದ ಮಾತನಾಡಿ, ಸೂರ್ಯಗ್ರಹಣವನ್ನು ಬರೀಕಣ್ಣಿನಿಂದ ವೀಕ್ಷಿಸಬಾರದು. ಸೌರ ಕನ್ನಡಕಗಳನ್ನು ಉಪಯೋಗಿಸಿಕೊಂಡು ಈ ನೈಸರ್ಗಿಕ ವಿದ್ಯಮಾನ ನೋಡಿ ಆನಂದಿಸಬಹುದು. ಇದೇ ತಿಂಗಳ 26ರಂದು ನಗರದ ಅಂಬೇಡ್ಕರ್‌ ವೃತ್ತದ ಹತ್ತಿರ ಸಾಮೂಹಿಕ ಸೂರ್ಯಗ್ರಹಣ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಕರಾವಿಪ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ದಾನಿ ಬಾಬುರಾವ್‌, ಅಗಸ್ತÂ ಫೌಂಡೇಶನ್‌ನ ಮುಖ್ಯಸ್ಥ ಬಾಬುರಾವ್‌ ಸೆಲ್ಸಾರೆ ಮಾತನಾಡಿದರು. ಜೀವನ ಸಾಧನಾ ಫೌಂಡೇಶನ್‌ನ ಅಧ್ಯಕ್ಷ ಡಾ|ಆರ್‌.ಕೆ.ಚಾರಿ, ಮುಖ್ಯಗುರು ಕೀರ್ತಿಲತಾ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಸೂರ್ಯಗ್ರಹಣ ವೀಕ್ಷಣೆಯ ಬಗ್ಗೆ ಪ್ರಾಯೋಗಿಕವಾಗಿ ವಿವರವಾಗಿ ತರಬೇತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಗ್ರಹಣ ವೀಕ್ಷಿಸಲು ಎಲ್ಲಾ ಶಿಕ್ಷಕರಿಗೆ ಸೌರ ಕನ್ನಡಗಳನ್ನು ವಿತರಿಸಲಾಯಿತು. ಜಿಲ್ಲೆಯ ಎಲ್ಲಾ ವಿಜ್ಞಾನ ಶಿಕ್ಷಕ-ಶಿಕ್ಷಕಿಯರಾದ ಬಾಬುರಾವ್‌ ಮನ್ನಳ್ಳಿ, ಚಂದ್ರಕಾಂತ ಚಿಕ್ಲೆ, ಶಿವಾನಂದ ಕುಂಬಾರ, ರಮೇಶ ಭವರಾ ಮುಂತಾದವರು ಉಪಸ್ಥಿತರಿದ್ದರು.

ವಿಜ್ಞಾನ ಶಿಕ್ಷಕರಾದ ಸಂಜೀವಕುಮಾರ ಸ್ವಾಮಿ ನಿರೂಪಿಸಿದರು.
ಮಹಮ್ಮದ ರಫಿ ತಾಳಿಕೋಟಿ ಸ್ವಾಗತಿಸಿದರು. ಭಾರತಿ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next