ಬೀದರ: ಫಲಿತಾಂಶದಲ್ಲಿ ಕಳಪೆ ಸಾಧನೆಯೊಂದಿಗೆ ಕೊನೆ ಸ್ಥಾನದ ಅಪಖ್ಯಾತಿಗೆ ಒಳಗಾಗುತ್ತಿದ್ದ ಗಡಿ ನಾಡು ಬೀದರ ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಮೋಘ ಸಾಧನೆ ಮಾಡಿದೆ. ಶೇ. 64.61ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 30ರಿಂದ 18ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಬೀದರ ಜಿಲ್ಲೆ ಶೈಕ್ಷಣಿಕ ಪ್ರಗತಿಯಲ್ಲಿ ಹೊಸ ಆಶಾಭಾವ ಮೂಡಿಸಿದೆ.
ಪ್ರತಿ ವರ್ಷ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆಯ ಎರಡು ಸ್ಥಾನಕ್ಕೆ ಅಂಟಿಕೊಳ್ಳುತ್ತಿದ್ದ ಬೀದರ ನಿರಾಶೆ ಮೂಡಿಸುತ್ತಿತ್ತು. ಆದರೆ, ಈ ಬಾರಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಪಿಯು ಫಲಿತಾಂಶದ ಸಾಧನೆ ಅಚ್ಚರಿ ಮೂಡಿಸಿದೆ. ಕಳೆದ ವರ್ಷ ಶೇ. 55.75 ರಷ್ಟು ಫಲಿತಾಂಶದೊಂದಿಗೆ 30ನೇ ಸ್ಥಾನದಲ್ಲಿದ್ದ ಬೀದರ ಶೇ. 8.86ರಷ್ಟು ಹೆಚ್ಚುವರಿ ಸಾಧನೆಯೊಂದಿಗೆ ಶೇ. 64.61ರಷ್ಟು ಫಲಿತಾಂಶ ದಾಖಲಿಸಿದೆ. ಜಿಲ್ಲಾವಾರು ಫಲಿತಾಂಶದಲ್ಲಿ 18ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಗ್ರಾಮೀಣ ಮಕ್ಕಳು ಮೇಲುಗೈ: ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 14,285 ವಿದ್ಯಾರ್ಥಿಗಳಲ್ಲಿ 9,229 ಮಕ್ಕಳು ಉತ್ತೀರ್ಣರಾಗಿದ್ದಾರೆ. ಪ್ರತಿ ಸಲದಂತೆ ಗ್ರಾಮೀಣ ಪ್ರದೇಶದ ಪರೀಕ್ಷಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ಒಟ್ಟು 11,373 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 7,101 (ಶೇ. 62.44) ಮಕ್ಕಳು ಪಾಸಾಗಿದ್ದರೆ, ಗ್ರಾಮೀಣ ಪ್ರದೇಶದ 2912 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,128 (ಶೇ. 73.08) ಮಕ್ಕಳು ತೇರ್ಗಡೆಯಾಗಿದ್ದಾರೆ.
ಇನ್ನೂ ವಿಭಾಗವಾರು ಗಮನಿಸಿದರೆ ವಿಜ್ಞಾನ ವಿಭಾಗಕ್ಕೆ ಶೇ. 75.65ರಷ್ಟು ಫಲಿತಾಂಶ ಬಂದಿದ್ದರೆ, ಕಲಾ ವಿಭಾಗ ಶೇ. 48.24 ಮತ್ತು ವಾಣಿಜ್ಯ ವಿಭಾಗಕ್ಕೆ ಶೇ. 54.81ರಷ್ಟು ಫಲಿತಾಂಶ ಇದೆ. ಪರೀಕ್ಷೆ ಬರೆದ ವಿಜ್ಞಾನ ವಿಭಾಗದ 7,951 ಮಕ್ಕಳಲ್ಲಿ 6,015 ಜನ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ 3,922ರಲ್ಲಿ 1,892 ಪರೀಕ್ಷಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 2,412 ವಿದ್ಯಾರ್ಥಿಗಳಲ್ಲಿ 1322 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಯೋಜನಾ ಬದ್ಧ ಕಾರ್ಯಕ್ರಮ, ಪರಿಶ್ರಮದ ಫಲವಾಗಿ ಫಲಿತಾಂಶ ಸುಧಾರಣೆ ಕಂಡಿದೆ. ಉಪನ್ಯಾಸಕರಿಗೆ ತಜ್ಞರಿಂದ ವಿಷಯವಾರು ತರಬೇತಿ ಮತ್ತು ವಿದ್ಯಾರ್ಥಿಗಳಿಗೆ ನಿರಂತರ ಕಾರ್ಯಾಗಾರ ನಡೆಸಲಾಗಿತ್ತು. ಜತೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದಿಂದ ಪ್ರಕಟಿಸಿ ಪರೀಕ್ಷಾರ್ಥಿಗಳಿಗೆ ವಿತರಿಸಿದ್ದ “ಮಾರ್ಗದರ್ಶಿ’ ಕಿರು ಹೊತ್ತಿಗೆಯಿಂದಲೂ ಸಾಕಷ್ಟು ಪ್ರಯೋಜನವಾಗಿದೆ.
ಪಿಯುಸಿಯಲ್ಲಿ ಬೀದರ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಇದಕ್ಕೆ ಯೋಜನಾ ಬದ್ಧ ಕಾರ್ಯಕ್ರಮ, ತಂಡದ ಪರಿಶ್ರಮದ ಫಲವೇ ಕಾರಣ. ಫಲಿತಾಂಶದಲ್ಲಿ ಸುಧಾರಣೆ ನಿರೀಕ್ಷೆ ಇತ್ತು. ಆದರೆ, ಜಿಲ್ಲಾವಾರು ಪಟ್ಟಿಯಲ್ಲಿ 18ನೇ ಸ್ಥಾನಕ್ಕೆ ಜಿಗಿಯುತ್ತದೆ ಅಂದುಕೊಂಡಿರಲಿಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಅಭಿನಂದನೆಗಳು. –
ರಮೇಶ ಬೇಜಗಂ , ಡಿಡಿಪಿಯು, ಬೀದರ.
-ಶಶಿಕಾಂತ ಬಂಬುಳಗೆ