Advertisement

Bidar ಅಪಘಾತ: ಹಸೆಮಣೆ ಏರಬೇಕಾಗಿದ್ದ ಯುವತಿ, ಸಹೋದರಿ ಮೃತ್ಯು

07:08 PM Apr 28, 2023 | Team Udayavani |

ಬೀದರ್ : ಔರಾದ್ ತಾಲೂಕಿನ ಕೌಠಾ ಬಳಿ ಶುಕ್ರವಾರ ಸಾಯಂಕಾಲ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಾಗಿದ್ದ ಯುವತಿ ಮತ್ತು ಆಕೆಯ ಸಹೋದರಿ  ಸಾವನ್ನಪ್ಪಿರುವ ಹೃದಯವಿದ್ರಾಹಕ ಘಟನೆ ನಡೆದಿದೆ.

Advertisement

ತಂದೆ ಜತೆಗೆ ಬೈಕ್ ಮೇಲೆ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಿಕೆ ವಿತರಿಸಲು ಹೋಗುವಾಗ ಈ ದುರ್ಘಟನೆ ಆಗಿದೆ. ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ ಶ್ರದ್ಧಾ ಜುಲ್ಫೆ (22) ಮತ್ತು ಸಂಸ್ಕೃತಿ ಜುಲ್ಫೆ (19) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಂದೆ ದಿಲೀಪ ಜುಲ್ಫೆ ತೀವ್ರವಾಗಿ ಗಾಯಗೊಂಡಿದ್ದು, ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ 9 ರಂದು ಶ್ರದ್ಧಾ ಜುಲ್ಫೆ ಅವರ ಮದುವೆ ನಿಶ್ಚಯವಾಗಿದ್ದು, ಬೀದರನಿಂದ ತಂದೆ ದಿಲೀಪ ತಮ್ಮಿಬ್ಬರು ಪುತ್ರಿಯರೊಂದಿಗೆ ಔರಾದ್ ತಾಲೂಕಿನ ಎಕಂಬಾ ಗ್ರಾಮಕ್ಕೆ ಬೈಕ್ ಮೇಲೆ ತೆರಳುತ್ತಿದ್ದರು. ಕೌಠಾ ಸಮೀಪ ಜವರಾಯನಂತೆ ಎದುರಿಗೆ ಬಂದ ಬೊಲೇರೋ ಪಿಕ್‌ಅಪ್ ವಾಹನ ಢಿಕ್ಕಿ ಹೊಡೆದಿದೆ. ತೀವ್ರ ರಕ್ತ ಸ್ರಾವದಿಂದಾಗಿ ಶ್ರದ್ಧಾ ಮತ್ತು ಸಂಸ್ಕೃತಿ ಕೊನೆಯುಸಿರೆಳೆದಿದ್ದಾರೆ. ಸಂತಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೊಂದು ವಾರದಲ್ಲಿ ಮದುವೆ ಸಂಭ್ರಮ ನಡೆಯಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next