ಬೀದರ್: ಕಾಮಗಾರಿಯ ಬಿಲ್ ಗಾಗಿ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದ ಘಟನೆ ಸೆ.10ರ ಮಂಗಳವಾರ ನಡೆದಿದೆ.
ತಾಲೂಕಿನ ಕೋಸಂ ಗ್ರಾ.ಪಂ. ಪಿಡಿಒ ರಾಹುಲ್ ದಂಡೆ ಹಾಗೂ ತಾ.ಪಂ. ತಾಂತ್ರಿಕ ಸಹಾಯಕ (ನರೇಗಾ) ಸಿದ್ರಾಮೇಶ್ವರ ಬಂಧಿತರು.
ಕೋಸಂ ಗ್ರಾ.ಪಂ. ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರ ಸುನೀಲ ಸಕಾರಾಮ ಪಡೆದಿದ್ದರು. ಅನ್ಯ ಕೆಲಸದಲ್ಲಿ ನಿರತರಾಗಿದ್ದರಿಂದ ಸುನೀಲ ಸೂಚನೆ ಮೇರೆಗೆ 15 ಕಾಮಗಾರಿಗಳನ್ನು ಗುತ್ತಿಗೆದಾರ ಅರವಿಂದ ಮಾಧವರಾವ ಭಾಲ್ಕೆ ಮಾಡಿದ್ದರು. ಬಿಲ್ ಮೊತ್ತ ಬಿಡುಗಡೆ ಮಾಡುವಂತೆ ಗುತ್ತಿಗೆದಾರ ಅರವಿಂದ ಕೇಳಿದರೆ ಪಿಡಿಒ ರಾಹುಲ್ 75 ಸಾವಿರ ರೂ. ಹಾಗೂ ಕಾಮಗಾರಿಗಳ ಧೃಡೀಕರಣ, ಅಳತೆ ಪುಸ್ತಕ ಬರೆದು ಕೊಟ್ಟಿದ್ದರಿಂದ ತಾ.ಪಂ.ನ ಸಿದ್ರಾಮೇಶ್ವರ 1.88 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಬೇಸರಗೊಂಡಿದ್ದ ಅರವಿಂದ ಲೋಕಾಯುಕ್ತರಿಗೆ ದೂರು ನೀಡಿದ್ದರು. ಮುಂಗಡವಾಗಿ ಪಿಡಿಒ 30 ಸಾವಿರ ರೂ. ಹಾಗೂ ತಾ.ಪಂ.ನ ಸಿದ್ರಾಮೇಶ್ವರ 70 ಸಾವಿರ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಸೋಮವಾರ ಬಲೆ ಬೀಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ತನಿಖಾಧಿಕಾರಿ ಬಾಬಾಸಾಹೇಬ್, ಸಂತೋಷ ರಾಠೋಡ್, ಉದ್ದಂಡಪ್ಪ, ಅರ್ಜುನಪ್ಪ ಹಾಗೂ ಸಿಬ್ಬಂದಿ ಶ್ರೀಕಾಂತ. ವಿಷ್ಣುರಡ್ಡಿ, ವಿಜಯಶೇಖರ, ಶಾಂತಲಿಂಗ, ಕಿಶೋರಕುಮಾರ, ಕುಶಾಲ, ಅಡೆಪ್ಪ, ಭರತ, ಶುಕ್ಲೋಧನ, ಸುವರ್ಣಾ, ಸರಸ್ವತಿ, ನಾಗಶೆಟ್ಟಿ, ಜಗದೀಶ್, ರಮೇಶ, ಹಾತಿಸಿಂಗ್, ಕಂಟೆಪ್ಪ ತಂಡದಲ್ಲಿದ್ದರು.