Advertisement

ಇನ್ನೂ ಸರಿ ದಾರಿಗೆ ಬಾರದ ಬಸ್‌

06:59 PM Apr 09, 2021 | Team Udayavani |

ಬೀದರ: ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಆರಂಭಿಸಿರುವ ಅನಿರ್ದಿಷ್ಟಾವಧಿ  ಸಾರಿಗೆ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾರ್ಯಾಚರಣೆ ಹೊರತುಪಡಿಸಿದರೆ ಬಹುತೇಕ ಸರ್ಕಾರಿ ಬಸ್‌ ಸಂಚಾರ ಸ್ತಬ್ಧವಾಗಿತ್ತು. ಪರ್ಯಾಯ ವ್ಯವಸ್ಥೆ ನಡುವೆಯೂ ಪ್ರಯಾಣಿಕರು ಪರದಾಡುವಂತಾಯಿತು.

Advertisement

ಮುಷ್ಕರದ ಎರಡನೇ ದಿನ ಎನ್‌ಈಕೆಆರ್ ಟಿಸಿ ಮೇಲಾಧಿ ಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರಾದರೂ ನೌಕರರು ಬೇಡಿಕೆ ಈಡೇರಿಸುವವರೆಗೆ ಬಸ್ ರಸ್ತೆಗಿಳಿಸಲ್ಲ ಎಂದು ಪಟ್ಟು ಹಿಡಿದರು. ಆದರೆ, ಕೆಲವು ನೌಕರರು ಅಧಿಕಾರಿಗಳ ಕೋರಿಕೆ ಮೇರೆಗೆ ಜಿಲ್ಲೆಯ 9 ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಡೆಸಿದರು.

ಬೀದರ-ಭಾಲ್ಕಿ, ಬೀದರ- ಉದಗೀರ್‌, ಬೀದರ-ಔರಾದ, ಬೀದರ-ಜಹೀರಾಬಾದ್‌, ಹುಮನಾಬಾದ-ಚಿಟಗುಪ್ಪ, ಬೀದರ- ಹುಮನಾಬಾದ, ಬಸವಕಲ್ಯಾಣ-ಚಿಟಗುಪ್ಪ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರ ನಡೆಯಿತು. ಪ್ರತಿ ಬಸ್‌ಗಳಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಇದನ್ನು ಹೊರತುಪಡಿಸಿದರೆ ಜಿಲ್ಲೆಯ ಯಾವುದೇ ಮಾರ್ಗಗಳಲ್ಲಿ ಸಾರಿಗೆ ಬಸ್ ಸಂಚರಿಸಲಿಲ್ಲ. ಜಿಲ್ಲಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ಚಾಲಕ ಮತ್ತು
ನಿರ್ವಾಹಕರು ಸೇರಿ ಇತರ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆಗೆ ಸಾಥ್‌ ನೀಡಿದ್ದರು. ಯಾರೊಬ್ಬ ನೌಕರರು ಸಹ ಡಿಪೋದತ್ತ ಮುಖ ಮಾಡಲೇ ಇಲ್ಲ. ಹಾಗಾಗಿ ಜಿಲ್ಲೆಯ 6 ಡಿಪೋಗಳಿಂದ ನಿತ್ಯ ಕಾರ್ಯಾಚರಣೆ ಆಗುವ 500ಕ್ಕೂ ಬಸ್‌ ಗಳು ರಸ್ತೆಗೆ ಇಳಿಯಲೇ ಇಲ್ಲ.

ಸರ್ಕಾರ ಮತ್ತು ಸಾರಿಗೆ ಸಂಸ್ಥೆ ನೌಕರರ ಹಗ್ಗ ಜಗ್ಗಾಟದಿಂದ ಪ್ರಯಾಣಿಕರು ಪರದಾಡುವಂತಾಗಿದೆ. 6ನೇ ವೇತನಕ್ಕಾಗಿ ನೌಕರರು ಹಠ ಹಿಡಿದಿದ್ದರೆ, ಇತ್ತ ಸರ್ಕಾರ ಸಿಬ್ಬಂದಿ ಮಣಿಸಲು ಅಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದೇ. ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ವಾಹನ ರಸ್ತೆಗಿಳಿಸಿದೆ. ಬೀದರ ಕೇಂದ್ರ ಬಸ್ ನಿಲ್ದಾಣದಿಂದ ಗುರುವಾರ ಖಾಸಗಿ 30 ಬಸ್ ಗಳು ಮತ್ತು 116 ಟ್ರಾಕ್ಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಪರದಾಡುವ ಸ್ಥಿತಿ ಎದುರಾಗದಿದ್ದರೂ ಪ್ರಯಾಣಿಕರಿಗೆ ದುಪ್ಪಟ್ಟು ಹಣ ವಸೂಲಿಗೆ ಇಳಿದದ್ದು ಆರ್ಥಿಕ ಹೊರೆಗೆ ಕಾರಣವಾಗುತ್ತಿದೆ.

Advertisement

ಇನ್ನೂ ಗ್ರಾಮೀಣ ಭಾಗದಲ್ಲಿ ಬಸ್‌ ಬಂದ್ ನಿಂದ ತೀವ್ರ ಬಿಸಿ ತಟ್ಟಿದ್ದು, ಆಟೋಗಳಲ್ಲಿ ದುಬಾರಿ ಹಣ ಕೊಟ್ಟು ಸಂಚರಿಸಬೇಕಾಯಿತು. ಗಡಿ ಜಿಲ್ಲೆಯಾಗಿರುವ ಬೀದರನಿಂದ ನಿತ್ಯ ಸಂಚರಿಸುವ ಮಹಾರಾಷ್ಟ್ರದ ಬಸ್‌ಗಳನ್ನು 10 ರಿಂದ 85ಕ್ಕೆ ಹಾಗೂ ತೆಲಂಗಾಣದ 80ರಿಂದ 120ಕ್ಕೆ ಬಸ್‌ ಹೆಚ್ಚಿಸಿ ಪ್ರಯಾಣಿಕರಿಗೆ
ಅನುಕೂಲ ಮಾಡಿಕೊಡಲಾಗಿದೆ.

ವೇತನ ಹೆಚ್ಚಳ ವಿಷಯದಲ್ಲಿ ಸರ್ಕಾರ ನೌಕರರಿಗೆ ಅನುಕೂಲ ಮಾಡಿಕೊಡಲಿದ್ದು, ಈ ಬಗ್ಗೆ ಸಿಬ್ಬಂದಿಗೆ ಮನವೊಲಿಸಲಾಗುತ್ತಿದೆ. ಗುರುವಾರ ಜಿಲ್ಲೆಯ 9 ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಡೆದಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ ಆಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಸಿ.ಎಸ್‌. ಫುಲೇಕರ್‌,
ವಿಭಾಗೀಯ ನಿಯಂತ್ರಣಾಧಿಕಾರಿ,
ಎನ್‌ಈಕೆಆರ್‌ಟಿಸಿ, ಬೀದರ

Advertisement

Udayavani is now on Telegram. Click here to join our channel and stay updated with the latest news.

Next