ಬೀದರ: ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಪದೇ ಪದೇ ಕೊನೆ ಸ್ಥಾನದ ಹಣೆಪಟ್ಟಿ ಹೊರುತ್ತಿದ್ದ ಬೀದರ್ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಭಾರೀ ಸುಧಾರಣೆ ಕಂಡಿದೆ.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.5.23 ಫಲಿತಾಂಶ ಹೆಚ್ಚಾಗಿದೆ. ಅಲ್ಲದೆ, ಫಲಿತಾಂಶದಲ್ಲಿ ಜಿಲ್ಲೆಗಿದ್ದ ಕೊನೆ ಸ್ಥಾನದ ಹಣೆಪಟ್ಟಿಗೆ ಮುಕ್ತಿ ದೊರೆತಿದೆ. ಕಳೆದ ವರ್ಷ ಜಿಲ್ಲೆ ಶೇ.60.71 ಫಲಿತಾಂಶ ಪಡೆದು, ರಾಜ್ಯದಲ್ಲಿ 33ನೇ ಸ್ಥಾನ ಪಡೆದಿತ್ತು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಒಟ್ಟಾರೆ ಶೇ.65.94 ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ 27ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ 7 ಸ್ಥಾನಗಳಲ್ಲಿ ಜಿಗಿತ ಕಂಡುಬಂದಿದ್ದು, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಹರ್ಷ ಮೂಡಿಸಿದೆ.
ಪ್ರತಿ ವರ್ಷ ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶ ಬಂದರೆ ಸಾಕು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪ್ರಶಂಸೆಗೆ ವ್ಯಕ್ತವಾಗಿದೆ. ಕಳೆದ ಹತ್ತು ವರ್ಷಗಳ ಫಲಿತಾಂಶದ ಸಾಧನೆ ಗಮನಿಸಿದಾಗ ಪ್ರಸಕ್ತ ಸಾಲಿನಲ್ಲಿ ಬಂದ ಫಲಿತಾಂಶ ಉತ್ತಮವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಫಲಿತಾಂಶದಲ್ಲಿ ರಾಜ್ಯಕ್ಕೆ 29ನೇ ಸ್ಥಾನ ಪಡೆದಿರುವ ಜಿಲ್ಲೆ, ಗುಣಮಟ್ಟದ ಶಿಕ್ಷಣದ ನೀಡುವಲ್ಲಿ 27ನೇ ಸ್ಥಾನ ಪಡೆದುಕೊಂಡಿದೆ.
ಹೇಗೆ ಸುಧಾರಣೆ ಆಯಿತು?: ಈ ಬಾರಿ ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇಲಾಖೆ ವಿವಿಧ ಪ್ರಯತ್ನ, ಪ್ರಯೋಗಗಳನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಶೇ.40ಕ್ಕೂ ಕಡಿಮೆ ಫಲಿತಾಂಶ ಹೊಂದಿರುವ ಶಾಲೆಗಳನ್ನು ಗುರುತಿಸಿ ಆಯಾ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ವಿಶೇಷ ತರಬೇತಿಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, ವಿವಿಧ ಶಾಲೆಗಳಲ್ಲಿ ಕಲಿಯೆಯಲ್ಲಿ ಹಿಂದುಳಿದ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವ ಕಾರ್ಯ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶ ಸುಧಾರಣೆ ಸಾಧ್ಯವಾಗಿದೆ. ಆಯಾ ಶಾಲೆಗಳ ವಿಷಯವಾರು ಶಿಕ್ಷಕರು ಹಾಗೂ ಮುಖ್ಯ ಗುರುಗಳ ಸಭೆಗಳನ್ನು ನಡೆಸಿ ಫಲಿತಾಂಶ ಸುಧಾಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಕೂಡ ಫಲಿತಾಂಶ ಸುಧಾರಣೆಗೆ ಕಾರಣ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೂನ್ಯ ಫಲಿತಾಂಶ ಶಾಲೆ
ಬೀದರ ತಾಲೂಕಿನ ಮಾಣಿಕಪ್ಪ ಬಂಡೆಪ್ಪ ಖಾಶೆಂಪೂರ ಪ್ರೌಢ ಶಾಲೆ ಹಾಗೂ ಬಸವಕಲ್ಯಾಣದ ತ್ರಿಪುರಾಂತ ದಿನಧಾಮ್ ಕೇಶವ ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.
ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಈ ಬಾರಿ ಅನೇಕ ಪ್ರಯತ್ನಗಳನ್ನು ಮಾಡಿದ ಪರಿಣಾಮ ಫಲಿತಾಂಶದಲ್ಲಿ ಸುಧಾರಣೆ ಆಗಿದೆ. ಈ ಬಾರಿ ಹೊಸ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿ ಒಟ್ಟಾರೆ 28,180 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಈ ಬಾರಿ ಕನಿಷ್ಠ 25ನೇ ಸ್ಥಾನ ಪಡೆಯಬೇಕು ಎಂಬ ನಿರೀಕ್ಷೆಯನ್ನು ಶಿಕ್ಷಣ ಇಲಾಖೆ ಹೊಂದಿತ್ತು. ಆದರೂ ಕೂಡ 27ನೇ ಸ್ಥಾನ ಬಂದಿರುವುದು ಹರ್ಷ ತಂದಿದೆ. ಕೊನೆ ಸ್ಥಾನದ ಹಣೆ ಪಟ್ಟಿ ಅಳಸಿರುವುದು ಸಂತಸ ಮೂಡಿಸಿದೆ. ಮುಂದಿನ ದಿನಗಲ್ಲಿ ಕೂಡ ಈ ವರ್ಷದ ಯೋಜನೆಗಳನ್ನು ಮುಂದುವರಿಸಿ ಕನಿಷ್ಠ 20ನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
•
ಚಂದ್ರಶೇಖರ, ಡಿಡಿಪಿಐ ಬೀದರ
ದುರ್ಯೋಧನ ಹೂಗಾರ