ಬೀದರ: ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರ ಕುರಿತು ಬೆಂಗಳೂರು ಚುನಾವನಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಈ ವರೆಗೆ 2,06,036 ಮತದಾರರನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 13,29,545 ಮತದಾರರಿದ್ದು, ಈ ಪೈಕಿ ಮಹಿಳಾ ಮತದಾರರು 6,39,527 ಹಾಗೂ ಪುರುಷ ಮತದಾರರ ಸಂಖ್ಯೆ 6,90,018 ಇದೆ. 15ರೊಳಗೆ ಪರಿಷ್ಕರಣೆ ಕಾರ್ಯ ಹೆಚ್ಚಿಸುವಂತೆ ಸಂಬಂಧಪಟ್ಟ ತಹಶೀಲ್ದಾರ್, ಬಿಎಲ್‌ಒ, ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಅವಕಾಶ ಇದೆ. ಅನರ್ಹ ಮತದಾರರ ಹೆಸರನ್ನು ತೆಗೆದು ಹಾಕುವುದು, ವಿಳಾಸ, ಹೆಸರು ತಪ್ಪು ಸರಿಪಡಿಸುವಿಕೆ, ಭಾವಚಿತ್ರ ಸರಿಪಡಿಸುವಿಕೆ, ಸ್ಮಾರ್ಟ್ ಮೊಬೈಲ್ ಮೂಲಕ ಉತ್ತಮ ಸೇವೆ ಒದಗಿಸಲು ಸಂಪರ್ಕ ವಿವರಗಳನ್ನು ಪಡೆಯುವುದು, ಹೊಸ ಮತಗಟ್ಟೆಗಳ ಸ್ಥಾಪನೆ ಹಾಗೂ ಪುನರ್ ವಿಂಗಡಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಂದು ದಾಖಲೆ ನೀಡಿ: ಮತದಾರರು ಅಥವಾ ಮತದಾರರಾಗಲು ಅರ್ಹರಾದವರು ಪಾಸ್ ಪೋರ್ಟ್, ಚಾಲನಾ ಪರವಾನಗಿ, ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿ, ಸರ್ಕಾರಿ/ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ರೈತ ಗುರುತಿನ ಚೀಟಿ, ನೀರಿನ ಬಿಲ್/ ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕ ಬಿಲ್, ಚುನಾವಣೆ ಆಯೋಗ ಅನುಮೋದಿಸಿದ ಯಾವುದಾದರೂ ಒಂದು ದಾಖಲೆಗಳಿದ್ದರೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದರು.
ಯುಜಿಡಿ ಕಾಮಗಾರಿ ತನಿಖೆ ಆರಂಭ: ನಗರದಲ್ಲಿ ಮಾಡಲಾದ ಯುಜಿಡಿ ಕಾಮಗಾರಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈಗಾಗಲೇ 10 ಜನ ಅ ಧಿಕಾರಿಗಳ ತಂಡ ರಚಿಸಿ ಯುಜಿಡಿ ಕಾಮಗಾರಿ ಕುರಿತು ತನಿಖೆ ನಡೆಸುತ್ತಿದೆ. ಅಧಿಕಾರಿಗಳು ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕುಡಿವ ನೀರು ಪೂರೈಕೆ ಸಮಸ್ಯೆ:ಪ್ರಸಕ್ತ ಸಾಲಿನಲ್ಲಿ ಕುಡಿವ ನೀರಿನ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತು ಜಿಲ್ಲಾಡಳಿತಕ್ಕೆ ಚಿಂತೆ ಕಾಡುತ್ತಿದೆ. ಈಲ್ಲೆಯಲ್ಲಿ ಈ ವರ್ಷಕೂಡ ಮಳೆ ಕೊರತೆ ಇದೆ. ಆದರೂ ಕೂಡ ಪ್ರತಿನಿತ್ಯ ಎರಡು ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಅಕ್ರಮ ಲೇಔಟ್ ಪತ್ತೆ ಕಾರ್ಯ: ಜಿಲ್ಲೆಯಲ್ಲಿನ ಅನಧಿಕೃತ ಲೇಔಟ್‌ಗಳ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಕಂದಾಯ ಇಲಾಖೆಯ ಅಧಿ ಕಾರಿಗಳು ಇತರೆ ಕೆಲಸದಲ್ಲಿ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ವರದಿಗಳು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶಗಾಳಿ ಇದ್ದರು.