ಬೀದರ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಈಗ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ ತೊಗರಿ ಹಣ ಸರ್ಕಾರದಿಂದ ಕೈ ಸೇರದಿರುವುದು ಅನ್ನದಾತರನ್ನು ಅಕ್ಷರಶಃ ಸಂತ್ರಸ್ತರನ್ನಾಗಿಸಿದೆ.
ಜಿಲ್ಲೆಯ ರೈತರ ಸುಮಾರು 17 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.ಕೋವಿಡ್ ವೈರಸ್‌ನಿಂದ ಜೀವನದ ಮೇಲಷ್ಟೇ ಅಲ್ಲ ರೈತರ ಕೈಗೆ ಬಂದ ಫಸಲಿಗೂ ಕೆಟ್ಟ ಪರಿಣಾಮ ಬೀರಿದೆ. ಒಂದೆಡೆ ಮಾರುಕಟ್ಟೆ ಬಂದ್ ಮತ್ತೂಂದೆಡೆ ಸಾಗಣೆ ಸೌಲಭ್ಯ ಇಲ್ಲದಿರುವುದರಿಂದ ಬೆಳೆ ಉಳಿಸಿಕೊಳ್ಳಲಾಗದೇ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ರೈತರಿಂದ ಖರೀದಿಸಿರುವ ತೊಗರಿ ಹಣ ಸಕಾಲಕ್ಕೆ ಬಿಡುಗಡೆ ಮಾಡದಿರುವುದು ಅವರ ಮೇಲೆ ಮತ್ತಷ್ಟು ಆರ್ಥಿಕ ಬರೆ ಎಳೆದಂತಾಗಿದೆ.
ತೊಗರಿ ಕಣಜ ಎನಿಸಿಕೊಂಡಿರುವ ಬೀದರ ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆ, ಕೀಟ ಬಾಧೆ ಇಲ್ಲವಾದ್ದರಿಂದ ರೈತರು ಬಂಪರ್ ಇಳುವರಿ ಪಡೆದಿದ್ದಾರೆ. ಆದರೆ, ಸಿಎಂ ಬಿಎಸ್‌ವೈ ಘೋಷಿಸಿದಂತೆ ಬೇಳೆ ಖರೀದಿ ಮಿತಿ 10ರಿಂದ 20 ಸಾವಿರಕ್ಕೆ ಹೆಚ್ಚಳವೂ ಆಗಲಿಲ್ಲ, ಸಂದಿಗ್ಧ ಸ್ಥಿತಿಯಲ್ಲಿ ತೊಗರಿ ಬಾಕಿ ಹಣ ಸಹ ಜಮೆ ಮಾಡದಿರುವುದು ರೈತರು ಹಿಡಿ ಶಾಪ ಹಾಕುವಂತಾಗಿದೆ. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗಾಗಿ ಗಡಿ ಜಿಲ್ಲೆ ಬೀದರನಲ್ಲಿ 50,177 ರೈತರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 43,023 ರೈತರಿಂದ 3,01,417 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಈ ಪೈಕಿ ಈವರೆಗೆ ಪ್ರತಿ ಕ್ವಿಂಟಲ್‌ಗೆ 6100 ರೂ. ಗಳಂತೆ 2,73,410 ಕ್ವಿಂಟಲ್ ತೊಗರಿಯ ಒಟ್ಟು 166 ಕೋಟಿ ರೂ. ರೈತರಿಗೆ ಪಾವತಿಸಲಾಗಿದೆ. ಆದರೆ, ಇನ್ನೂ 28 ಸಾವಿರ ಕ್ವಿಂಟಲ್ ತೊಗರಿಯ 17 ಕೋಟಿ ರೂ. ಬಾಕಿ ಉಳಿದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಸರ್ಕಾರ ನಿಲ್ಲಿಸಿತ್ತು. ಈಗ ಮತ್ತೆ ಈ ಹಿಂದೆ ನೋಂದಣಿ ಮಾಡಿಸಿಕೊಂಡು ಬಾಕಿ ಉಳಿದಿದ್ದ ರೈತರಿಂದ ಖರೀದಿಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1 ಲಕ್ಷ ಮೆ. ಟನ್ ಖರೀದಿಗೆ ಅನುಮತಿ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ ಸುಮಾರು 7154 ಬಾಕಿ ಉಳಿದ ರೈತರಿಂದ ತೊಗರಿ ಖರೀದಿ ಆಗಬೇಕಿದೆ. ಇನ್ನೂ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 115 ಸೊಸೈಟಿಗಳ ಮೂಲಕ 5 ಸಾವಿರ ಕ್ವಿಂಟಲ್ ಕಡಲೆ ಖರೀದಿಸಲಾಗಿದ್ದು, ಪ್ರತಿ ಕ್ವಿಂಟಲ್‌ಗೆ 4875 ದರದಂತೆ 24.37 ಲಕ್ಷ ರೂ. ಪಾವತಿ ಮಾಡಬೇಕಿದೆ.
ಬೀದರ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿರುವ ರೈತರಿಗೆ ಈವರೆಗೆ ಎರಡು ಹಂತದಲ್ಲಿ ಒಟ್ಟು 166 ಕೋಟಿ ರೂ. ಪಾವತಿಸಲಾಗಿದೆ. ಇನ್ನೂ 28 ಸಾವಿರ ರೂ. ಕ್ವಿಂಟಲ್ ತೊಗರಿಯ 17 ಕೋಟಿ ರೂ. ಬಾಕಿ ಇದ್ದು, ನಾಲ್ಕೈದು ದಿನದಲ್ಲಿ ಪಾವತಿಯಾಗಲಿದೆ. ಬಾಕಿ ನೋಂದಾಯಿತ 7 ಸಾವಿರ ರೈತರಿಂದ ತೊಗರಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ.
ಪ್ರಭಾಕರ, ಶಾಖಾ ವ್ಯವಸ್ಥಾಪಕ,
ಸಹಕಾರ ಮಾರಾಟ ಮಹಾಮಂಡಳ
ಶಶಿಕಾಂತ ಬಂಬುಳಗೆ