ಬೀದರ್: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ವಿರೋಧಿ ನಿಲುವು ಪಾಲಿಸುತ್ತಿದೆ ಎಂದು ಕಿಡಿಕಾರಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಮೂಲಕ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಈಶ್ವರ ಖಂಡ್ರೆ, ಕೇಂದ್ರ ಸರ್ಕಾರ ಸಂವಿಧಾನದ ವಿರುದ್ಧ ನೀತಿಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿದೆ. ಹಿಟ್ಲರ್ ಧೋರಣೆ ಸರ್ಕಾರದ ಐಡಿಯಾಲಜಿ ಆಗಿದ್ದು, ವಿರೋಧ ಪಕ್ಷದವರ ಧ್ವನಿ ಅಡಗಿಸುವ ಕೃತ್ಯಕ್ಕೆ ಮುಂದಾಗಿದೆ. ದೇಶದಲ್ಲಿ ಒಡೆದಾಳುವ ಸರ್ಕಾರ ಈ ನೀತಿ ಎಂದಿಗೂ ಫಲಿಸದು, ದೆಹಲಿಯಲ್ಲಿ ಚುನಾವಣೆ ಬಿಜೆಪಿ ತಕ್ಕ ಪಾಠವಾಗಿದೆ ಎಂದು ಹೇಳಿದರು.
ಸರ್ಕಾರಿ ಸೇವೆಯಲ್ಲಿ ಎಸ್.ಸಿ- ಎಸ್‌ಟಿ, ಹಿಂದುಳಿದ ವರ್ಗದವರ ನೇರ ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿ ಸಂವಿಧಾನದ ಮೂಲಭೂತ ಹಕ್ಕು ಆಗಿದೆ. ಆದರೆ, ಸುಪ್ರೀಂ ಕೋರ್ಟ್ ಇದು ಮೂಲಭೂತ ಹಕ್ಕಲ್ಲ, ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
Related Articles
ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ಸಮರ್ಥವಾದ ಮಂಡನೆ ಮಾಡದಿರುವುದು ಇಂಥ ತೀರ್ಪು ಹೊರಬೀಳು ಕಾರಣವಾಗಿದೆ. ಕೂಡಲೇ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿ, ಸಾಮಾಜಿಕ ನ್ಯಾಯಕ್ಕೆ ಆಗಿರುವ ಧಕ್ಕೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಎಸ್.ಸಿ-ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ನಿಲುವು ಅನುಸರಿಸುತ್ತಿದೆ. ಈ ವರ್ಗಕ್ಕೆ ಸಂವಿಧಾನದ ಕಲಂ 16 ರ ಅಡಿಯಲ್ಲಿ ಕೊಡಲಾದ ಸರ್ಕಾರಿ ಸೇವೆಯ ನೇರ ನೇಮಕಾತಿ ಹಾಗೂ ಬಡ್ತಿ ಮೀಸಲಾತಿ ಹಕ್ಕನ್ನು ಉಳಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಜಿ.ಪಂ ಅಧ್ಯಕ್ಷೆ ಗೀತಾ ಚಿದ್ರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ದತ್ತು ಮೂಲಗೆ, ಇರ್ಷಾದ್ ಪೈಲ್ವಾನ್, ಅಮೃತರಾವ ಚಿಮಕೋಡೆ, ಪಂಡಿತ ಚಿದ್ರಿ, ಮೀನಾಕ್ಷಿ ಸಂಗ್ರಾಮ್, ಬಕ್ಕಪ್ಪ ಕೋಟೆ, ಶಿವರಾಜ ಹಸನಕರ್ ಮತ್ತಿತರರು ಭಾಗವಹಿಸಿದ್ದರು.